ನವದೆಹಲಿ: ಯುದ್ಧ ಪೀಡಿತ ಉಕ್ರೇನ್‌ನಿಂದ ಭಾರತಕ್ಕೆ ಹಿಂತಿರುಗಿರುವ ವೈದ್ಯಕೀಯ ವಿದ್ಯಾರ್ಥಿಗಳಿಗೆ ಭಾರತೀಯ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮುಂದುವರಿಸಲು ಅವಕಾಶ ಕಲ್ಪಿಸಲಾಗದು ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಕಾನೂನಿನಲ್ಲಿ ಈ ಕುರಿತು ಯಾವುದೇ ಅವಕಾಶ ಇಲ್ಲದಿರುವ ಕಾರಣ ಹಾಗೂ ದೇಶದ ವೈದ್ಯಕೀಯ ಶಿಕ್ಷಣದ ಗುಣಮಟ್ಟವನ್ನು ಹಾಳುಗೆಡಹುವ ಸಾಧ್ಯತೆ ಇರುವುದರಿಂದ ಈ ವಿದ್ಯಾರ್ಥಿಗಳನ್ನು ಭಾರತದ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಿಗೆ ವರ್ಗಾಯಿಸಲು ಸಾಧ್ಯವಿಲ್ಲ ಎಂದು ಕೇಂದ್ರವು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಹೇಳಿದೆ.
'ಉಕ್ರೇನ್‌ನಿಂದ ವಾಪಸಾಗಿರುವ ವಿದ್ಯಾರ್ಥಿಗಳನ್ನು ಭಾರತದ ವೈದ್ಯಕೀಯ ಕಾಲೇಜುಗಳಿಗೆ ವರ್ಗಾಯಿಸುವುದಕ್ಕೆ ಭಾರತೀಯ ವೈದ್ಯಕೀಯ ಮಂಡಳಿ ಕಾಯ್ದೆ 1956 ಮತ್ತು ರಾಷ್ಟ್ರೀಯ ವೈದ್ಯಕೀಯ ಆಯೋಗ ಕಾಯ್ದೆ 2019ರಲ್ಲಿ ಅವಕಾಶಗಳಿಲ್ಲ. ಅಲ್ಲದೆ ಇದು ದೇಶದ ವೈದ್ಯಕೀಯ ಶಿಕ್ಷಣ ಗುಣಮಟ್ಟದ ಮಾನದಂಡಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ' ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
'ನೀಟ್' ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯದ ಹಾಗೂ ವಿದೇಶಗಳಲ್ಲಿ ಕೈಗೆಟಕುವ ದರದಲ್ಲಿ ವೈದ್ಯಕೀಯ ಶಿಕ್ಷಣ ದೊರೆಯುತ್ತಿದೆ ಎಂಬ ಕಾರಣಗಳಿಗಾಗಿ ಈ ವಿದ್ಯಾರ್ಥಿಗಳು ವ್ಯಾಸಂಗಕ್ಕಾಗಿ ವಿದೇಶಕ್ಕೆ ಹೋಗಿದ್ದರು ಎಂದು ಕೇಂದ್ರ ಹೇಳಿದೆ.
'ನೀಟ್'ನಲ್ಲಿ ಕಡಿಮೆ ಅಂಕಗಳನ್ನು ಪಡೆದಿರುವ ಈ ವಿದ್ಯಾರ್ಥಿಗಳಿಗೆ ಒಂದು ವೇಳೆ ಭಾರತದ ಪ್ರಮುಖ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಕಲ್ಪಿಸಿದರೆ ಅದರಿಂದ ಕಾನೂನಾತ್ಮಕ ತೊಡಕುಗಳು ಎದುರಾಗುತ್ತವೆ. ಈ ಪ್ರತಿಷ್ಠಿತ ಕಾಲೇಜುಗಳಲ್ಲಿ ವೈದ್ಯಕೀಯ ಸೀಟು ಸಿಗದೆ, ಅದಕ್ಕಿಂತ ಕೆಳಮಟ್ಟದ ಕಾಲೇಜುಗಳಲ್ಲಿ ಪ್ರವೇಶ ಪಡೆದಿರುವ ಹಾಗೂ ಎಲ್ಲೂ ಸೀಟು ಸಿಗದೆ ವೈದ್ಯಕೀಯ ಶಿಕ್ಷಣದಿಂದ ವಂಚಿತರಾಗಿರುವ ವಿದ್ಯಾರ್ಥಿಗಳು ಕಾನೂನು ಹೋರಾಟ ನಡೆಸಬಹುದು. ಈ ವಿದ್ಯಾರ್ಥಿಗಳಿಗೆ ಒಂದು ವೇಳೆ ದೇಶದ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಒದಗಿಸಿದರೂ, ಈ ಕಾಲೇಜುಗಳ ಶುಲ್ಕ ಭರಿಸುವುದು ಅವರಿಗೆ ಕಷ್ಟವಾಗಬಹುದು ಎಂದು ಹೇಳಿದೆ.
ಭಾರತದಲ್ಲಿ ವೈದ್ಯಕೀಯ ವ್ಯಾಸಂಗ ಮುಂದುವರಿಸಲು ಅವಕಾಶ ಕಲ್ಪಿಸುವಂತೆ ಕೋರಿ ಉಕ್ರೇನ್‌ನಿಂದ ಹಿಂದಿರುಗಿರುವ ವಿದ್ಯಾರ್ಥಿಗಳು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರ ಪೀಠ ಶುಕ್ರವಾರ ವಿಚಾರಣೆ ನಡೆಸುವ ಸಾಧ್ಯತೆ ಇದೆ. ರಷ್ಯಾವು ಉಕ್ರೇನ್ ಮೇಲೆ ಸೇನಾ ಕಾರ್ಯಾಚರಣೆ ಕೈಗೊಂಡ ಬಳಿಕ ಸುಮಾರು 20,000 ವಿದ್ಯಾರ್ಥಿಗಳು ಅಲ್ಲಿಂದ ಭಾರತಕ್ಕೆ ವಾಪಸಾಗಿದ್ದಾರೆ.