ನವದೆಹಲಿ: ಯುದ್ಧಪೀಡಿತ ಉಕ್ರೇನ್‌ನಿಂದ ಭಾರತಕ್ಕೆ ಮರಳಿರುವ ವೈದ್ಯ ವಿದ್ಯಾರ್ಥಿಗಳಿಗೆ ನೆರವಾಗಲು ನ್ಯಾಯಾಲಯವು ನೀಡಿದ ಸಲಹೆಗಳಂತೆ ಕಾರ್ಯೋನ್ಮುಖವಾಗಿದ್ದೇವೆ ಎಂದು ಕೇಂದ್ರ ಸರ್ಕಾರವು ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ಹೇಳಿದೆ.
ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತ ಮತ್ತು ಸುಧಾಂಶು ಧುಲಿಯಾ ಅವರಿದ್ದ ದ್ವಿಸದಸ್ಯ ಪೀಠಕ್ಕೆ 'ಈ ಹಿಂದಿನ ಆದೇಶದಲ್ಲಿ ಪೀಠವು ನೀಡಿರುವ ಸಲಹೆಗಳ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಆರೋಗ್ಯ ಸಚಿವಾಲಯದ ಕಾರ್ಯದರ್ಶಿಗಳಿಗೆ ಪತ್ರ ಬರೆಯಲಾಗಿದೆ.
ಕೇಂದ್ರದ ನಿರ್ದೇಶನದಂತೆ ಅವರು ಕಾರ್ಯೋನ್ಮುಖವಾಗಿದ್ದಾರೆ. ಇದನ್ನು ನಾವು ಅತ್ಯಂತ ಆದ್ಯತೆಯ ವಿಷಯವಾಗಿ ತೆಗೆದುಕೊಂಡಿದ್ದೇವೆ' ಎಂದು ಕೇಂದ್ರದ ಪರ ಹಾಜರಾಗಿದ್ದ ವಕೀಲರು ತಿಳಿಸಿದರು.
ಅಂತಿಮ ವರ್ಷದ ವೈದ್ಯ ವಿದ್ಯಾರ್ಥಿಗಳಿಗೆ ಆನ್‌ಲೈನ್ ಶಿಕ್ಷಣ ಪಡೆಯಲು ಅನುಮತಿಸಬಹುದು ಎಂದು ವಕೀಲರೊಬ್ಬರು ಹೇಳಿದಾಗ, ಪೀಠವು 'ನಾವು ಏನನ್ನೂ ಹೇಳುತ್ತಿಲ್ಲ. ನಾವು ಸಮಗ್ರವಾದ ಆದೇಶ ನೀಡುತ್ತೇವೆ' ಎಂದು ತಿಳಿಸಿ, ಮುಂದಿನ ವಿಚಾರಣೆಯನ್ನು ಅ.11ಕ್ಕೆ ಮುಂದೂಡಿತು.
ಸೆ.16ರಂದು ನ್ಯಾಯಪೀಠ ನೀಡಿರುವ ಆದೇಶದಲ್ಲಿ 'ಉಕ್ರೇನ್‌ನಿಂದ ಮರಳಿರುವ ವೈದ್ಯ ವಿದ್ಯಾರ್ಥಿಗಳಿಗೆ ಸಹಾಯ ಮಾಡಬೇಕು. ಇದಕ್ಕಾಗಿ ವೆಬ್ ಪೋರ್ಟಲ್ ರಚಿಸಿ, ವಿದ್ಯಾರ್ಥಿಗಳಿಗೆ ತಮ್ಮ ಕೋರ್ಸ್‌ಗಳನ್ನು ಪೂರ್ಣಗೊಳಿಸಲು ಪರ್ಯಾಯ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಲಭ್ಯವಿರುವ ಸೀಟುಗಳು ಮತ್ತು ಶುಲ್ಕದ ವಿವರಗಳ ಮಾಹಿತಿಯನ್ನು ವೆಬ್ ಪೋರ್ಟಲ್‌ನಲ್ಲಿ ನಿರ್ದಿಷ್ಟವಾಗಿ ನೀಡಬೇಕು. ಈ ವ್ಯವಸ್ಥೆಯು ಪಾರದರ್ಶಕವಾಗಿರಬೇಕು' ಎಂದು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿತ್ತು.
ಉಕ್ರೇನ್‌ನಿಂದ ವಾಪಸಾಗಿರುವ ವಿದ್ಯಾರ್ಥಿಗಳ ಗುಂಪೊಂದು, ತಾವು ಓದುತ್ತಿರುವ ಆಯಾ ಸೆಮಿಸ್ಟರ್‌ಗಳಿಂದಲೇ ಕೋರ್ಸ್ ಮುಂದುವರಿಸಲು ಸ್ವದೇಶಕ್ಕೆ ವರ್ಗಾವಣೆ ಬಯಸಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಈ ವಿದ್ಯಾರ್ಥಿಗಳ ಗುಂಪಿನಲ್ಲಿ ಮೊದಲ ವರ್ಷದ ಸೆಮಿಸ್ಟರ್‌ನಿಂದ ಹಿಡಿದು ಅಂತಿಮ ವರ್ಷದ ವೈದ್ಯ ವಿದ್ಯಾರ್ಥಿಗಳು ಇದ್ದಾರೆ.