ಭವಾನಿಪಟ್ಟಣ: ಒಡಿಶಾದ ಕಲಹಂದಿ ಜಿಲ್ಲೆಯಲ್ಲಿ ಪತ್ನಿಯ ಅನುಮತಿಯೊಂದಿಗೆ ವ್ಯಕ್ತಿಯೊಬ್ಬ ತೃತೀಯ ಲಿಂಗಿಯೊಬ್ಬರನ್ನು ವಿವಾಹವಾಗಿರುವುದು ಭಾರೀ ಸಂಚಲನ ಸೃಷ್ಟಿಸಿದೆ. ಶನಿವಾರ ರಾತ್ರಿ ಈ ಮದುವೆ ನಡೆದಿದೆ ಎನ್ನಲಾಗುತ್ತಿದೆ.
ನರ್ಲಾ ಬ್ಲಾಕ್ ವ್ಯಾಪ್ತಿಯ ಧುರ್ ಕುಟಿ ಗ್ರಾಮದ ತೃತೀಯ ಲಿಂಗಿ ಸಂಗೀತಾ,
ಭವಾನಿಪಟ್ಟಣದ ದೇವ್ ಪುರ್ ಗ್ರಾಮಕ್ಕೆ ಸೇರಿದ ಫಕೀರಾ ನಿಯಾಲ್ (30) ಅವರನ್ನು
ಮದುವೆಯಾಗಿದ್ದಾರೆ. ದಿನಗೂಲಿ ಕಾರ್ಮಿಕರಾಗಿರುವ ಫಕೀರಾನಿಗೆ
ಐದು ವರ್ಷಗಳ ಹಿಂದೆಯೇ ವಿವಾಹವಾಗಿದ್ದು, ಮೂರು ವರ್ಷದ ಗಂಡು ಮಗುವಿದೆ.
ಫಕೀರಾನಿಗೆ ಸಂಗೀತ ಪರಿಚಯವಾಗುತ್ತಿದ್ದಂತೆ ಇಬ್ಬರಲ್ಲಿ ಪ್ರೇಮಂಕುರವಾಗಿದ್ದು, ಇಬ್ಬರು ಮದುವೆಯಾಗಲು ನಿರ್ಧರಿಸಿದ್ದಾರೆ. ಆದಾಗ್ಯೂ, ಇದಕ್ಕೆ ಕುಟುಂಬ ಸದಸ್ಯರು ಅಡ್ಡಿಪಡಿಸಿದ್ದಾರೆ. ಈ ವಿಷಯವನ್ನು ಫಕೀರಾ ತನ್ನ ಹೆಂಡತಿಗೆ ತಿಳಿಸಿ, ಆಕೆ ಮದುವೆಗೆ ಅನುಮತಿ ನೀಡಿರುವುದಾಗಿ ಸ್ಥಳೀಯರು ಹೇಳುತ್ತಾರೆ.
ಫಕೀರಾ ಹೆಂಡತಿಯ ಸಮ್ಮುಖದಲ್ಲಿ ಶನಿವಾರ ರಾತ್ರಿ ದೇವಸ್ಥಾನದವೊಂದರಲ್ಲಿ ಸಂಪ್ರದಾಯದಂತೆ ಇಬ್ಬರು ಹಸೆಮಣೆಯೇರಿದ್ದು, ಕಾಮಿನಿ ಕಿನಾರ್ ಸಮುದಾಯದ ಅಧ್ಯಕ್ಷ ಸೇರಿದಂತೆ ಮತ್ತಿತರರು ದಂಪತಿಗೆ ಶುಭ ಕೋರಿದ್ದಾರೆ. ಸಂಗೀತಾ ಫಕೀರಾನ ಹೆಂಡತಿ ಜೊತೆ ಆತನ ಮನೆಯಲ್ಲಿ ವಾಸಿಸಲು ಆರಂಭಿಸಿದ್ದಾಳೆ. ಕುಟುಂಬ ಸದಸ್ಯರ ಒಪ್ಪಿಗೆಯಿಂದಾಗಿ ಸಾರ್ಥಕ ಭಾವ ಮೂಡಿದೆ ಎಂದು ಸಂಗೀತಾ ಸಂತಸ ವ್ಯಕ್ತಪಡಿಸಿದ್ದಾಳೆ. ಈ ರೀತಿಯಲ್ಲಿ ಕಾನೂನು ಬದ್ದವಾಗಿ ನಡೆದಿರುವ ಮೊದಲ ವಿವಾಹ ಚರ್ಚೆಗೆ ಗ್ರಾಸವಾಗಿದೆ.