ನವದೆಹಲಿ: ಕಾಂಗ್ರೆಸ್ ಪಕ್ಷದ ಬಹುನಿರೀಕ್ಷಿತ 3,570 ಕಿಲೋ ಮೀಟರ್ ದೂರದ ಭಾರತ್ ಜೋಡೋ ಯಾತ್ರೆಗೆ ಕನ್ಯಾಕುಮಾರಿಯಲ್ಲಿ ಇಂದು ಚಾಲನೆ ದೊರೆಯಲಿದೆ. ಈ ಯಾತ್ರೆ ಆರಂಭಕ್ಕೂ ಮುನ್ನ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪೆರಂಬೂರಿನ ರಾಜೀವ್ ಗಾಂಧಿ ಸ್ಮಾರಕದಲ್ಲಿ ನಡೆಯುವ ಪ್ರಾರ್ಥನಾ ಸಭೆಯಲ್ಲಿ ರಾಹುಲ್ ಗಾಂಧಿ ಪಾಲ್ಗೊಳ್ಳಲಿದ್ದಾರೆ.
ನಂತರ ಕನ್ಯಾಕುಮಾರಿಯಲ್ಲಿ ನಡೆಯಲಿರುವ ಭಾರತ್ ಜೋಡೋ ಯಾತ್ರೆ ಉದ್ಘಾಟನಾ ಕಾರ್ಯಕ್ರಮದಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಛತ್ತೀಸ್ ಗಢದ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಉಪಸ್ಥಿತರಿರುವರು. ಇದೇ ಸಂದರ್ಭದಲ್ಲಿ ಖಾದಿ ರಾಷ್ಟ್ರ ಧ್ವಜವನ್ನು ರಾಹುಲ್ ಗಾಂಧಿ ಹಸ್ತಾಂತರಿಸುವರು.
ಈ ಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯ ಜನರು ಪಾಲ್ಗೊಳ್ಳುವಂತೆ ಪ್ರಿಯಾಂಕಾ ಗಾಂಧಿ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ. ಅಗತ್ಯ ವಸ್ತುಗಳ ದರ ಏರಿಕೆ, ನಿರುದ್ಯೋಗ ಮತ್ತಿತರ ಜನಸಾಮಾನ್ಯರ ಸಮಸ್ಯೆಗಳತ್ತ ಗಮನ ಕೇಂದ್ರೀಕರಿಸುವುದು ಈ ಯಾತ್ರೆಯ ಉದ್ದೇಶವಾಗಿದೆ ಎಂದು ಅವರು ತಿಳಿಸಿದ್ದಾರೆ.
ಕನ್ಯಾಕುಮಾರಿಯಿಂದ ಶ್ರೀನಗರವರೆಗೆ ಸುಮಾರು 3,570 ಕಿ.ಮೀ ದೂರದ ಯಾತ್ರೆಯೂ 12 ರಾಜ್ಯಗಳು, ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸುಮಾರು ಐದು ತಿಂಗಳ ಕಾಲ ಸಾಗಲಿದೆ. ಯಾತ್ರೆ ವಾಸ್ತವವಾಗಿ ಗುರುವಾರ ಬೆಳಗ್ಗೆ 7 ಗಂಟೆಗೆ ಆರಂಭವಾಗಲಿದ್ದು, ರಾಹುಲ್ ಗಾಂಧಿ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಯಾತ್ರೆ ನಡೆಸಲಿದ್ದಾರೆ. ಯಾತ್ರೆ ಆರಂಭಕ್ಕೂ ಮುನ್ನ ಕನ್ಯಾಕುಮಾರಿಯಲ್ಲಿರುವ ವಿವೇಕಾನಂದ ರಾಕ್ ಸ್ಮಾರಕ, ತಿರುವಳ್ಳೂರು ಪ್ರತಿಮೆ ಮತ್ತು ಕಾಮರಾಜ್ ಸ್ಮಾರಕಕ್ಕೆ ರಾಹುಲ್ ಗಾಂಧಿ ಭೇಟಿ ನೀಡಲಿದ್ದಾರೆ.
ಭಾರತ್ ಜೋಡೋ ಯಾತ್ರೆ' ಸೆಪ್ಟೆಂಬರ್ 11 ರಂದು ಕೇರಳಕ್ಕೆ ತಲುಪಲಿದೆ. ನಂತರ 18 ದಿನಗಳ ಕಾಲ ಕೇರಳದಲ್ಲಿ ಸಾಗಿ ಸೆಪ್ಟೆಂಬರ್ 30 ರಂದು ಕರ್ನಾಟಕಕ್ಕೆ ಆಗಮಿಸಲಿದೆ. ಕರ್ನಾಟಕದಲ್ಲಿ 21 ದಿನಗಳ ಕಾಲ ನಡೆಯಲಿದೆ. ನಂತರ ಇತರ ಉತ್ತರ ಭಾರತದ ರಾಜ್ಯಗಳತ್ತ ಸಾಗಲಿದೆ.
ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭವಾಗುವ ಯಾತ್ರೆ, ತಿರುವನಂತಪುರಂ, ಕೊಚ್ಚಿ, ನಿಲಂಬೂರ್, ಮೈಸೂರು, ಬಳ್ಳಾರಿ, ರಾಯಚೂರು, ವಿಕರಬಾದ್, ನಾಂದೇಡ್, ಇಂದೋರ್, ಕೊಟಾ, ಅಳ್ವಾರ್, ಬುಲಂದ್‍ಶಹರ್, ದೆಹಲಿ, ಅಂಬಾಲಾ, ಪಠಾಣ್‍ಕೋಟ್ ಮೂಲಕ ಸಾಗಿ ಜಮ್ಮು ಮತ್ತು ಶ್ರೀನಗರದಲ್ಲಿ ಅಂತ್ಯಗೊಳ್ಳಲಿದೆ.
ಕಾಂಗ್ರೆಸ್ ಪಕ್ಷದ 'ಭಾರತ್ ಜೋಡೋ ಯಾತ್ರೆ' ಇಂದು ಕನ್ಯಾಕುಮಾರಿಯಲ್ಲಿ ಚಾಲನೆ
0
ಸೆಪ್ಟೆಂಬರ್ 06, 2022
Tags