ಉಪ್ಪಳ: ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದಲ್ಲಿ ಕಾಞಂಗಾಡಿನ ದ್ರೋಣಾಚಾರ್ಯ ಅಕಾಡೆಮಿ ಸಹಯೋಗದೊಂದಿಗೆ ‘ಅಗ್ನಿವೀರ್ ಸೇನೆ’ಗೆ ಸೇರಬಯಸುವ ಅಭ್ಯರ್ಥಿಗಳಿಗೆ ವಸತಿ ಸಹಿತ ಒಂದು ತಿಂಗಳ ಉಚಿತ ದೈಹಿಕ ತರಬೇತಿ ಶಿಬಿರವನ್ನು ಆಯೋಜಿಸಿದೆ. ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ, ಮುಂಬೈಯ ಶ್ರೀ ಸದಾಶಿವ ಶೆಟ್ಟಿ ಕುಳೂರು(ಚೇರ್‍ಮನ್ ಹೇರುಂಭಾ ಇಂಡಸ್ಟ್ರೀಸ್) ರವರು ಭಾರತಮಾತೆಗೆ ದೀಪಬೆಳಗಿ ಪುಷ್ಪಾರ್ಚನೆಗೈಯುವುದರ ಮೂಲಕ ಶಿಬಿರವನ್ನು ಉದ್ಘಾಟಿಸಿದರು.
ಶಿಬಿರ ಸಂಯೋಜಕ ಭಾರತೀಯ ನೇವಿಯ ನಿವೃತ್ತ ಅಧಿಕಾರಿ ವಿಜಯನ್ ಅವರು ತರಬೇತಿ ಶಿಬಿರದ ವಿವರಗಳನ್ನು ನೀಡಿದರು. ಪೂಜ್ಯ ಶ್ರೀಗಳು ತಮ್ಮ ಆಶೀರ್ವಚನ ನೀಡಿ ದೇಶ ಕಾಯುವ ಸೈನಿಕರ ಪಾತ್ರ ಎಲ್ಲಕ್ಕಿಂತಲೂ ಮಿಗಿಲಾದುದು. ಬಲಿಷ್ಠ ಭಾರತ ನಿರ್ಮಾಣಕ್ಕೆ ನಾವೆಲ್ಲ ಸೈನಿಕರ ತ್ಯಾಗವನ್ನು ಸ್ಮರಿಸಿ, ಅವರಿಗೆ ಸಹಕಾರ ನೀಡೋಣ ಎಂದು ದೇಶಭಕ್ತಿಯ ಕರೆ ನೀಡಿದರು.
ಪೂನಾದ ಉದ್ಯಮಿ ಭಾಸ್ಕರ ಶೆಟ್ಟಿ ಉಪಸ್ಥಿತರಿದ್ದು ಶುಭಹಾರೈಸಿದರು. ವೇದಿಕೆಯಲ್ಲಿ ಮಠದ ವಿಶ್ವಸ್ಥರಾದ, ರಾಜ್ಯಸಭಾ ಸದಸ್ಯ, ಬೆಂಗಳೂರಿನ ನಾರಾಯಣ್, ವಿಧಾನಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಶಶಿಧರ ಶೆಟ್ಟಿ ಗ್ರಾಮಚಾವಡಿ ಉಪಸ್ಥಿತರಿದ್ದರು. ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಸ್ವಾಗತಿಸಿ, ವಂದಿಸಿ ನಿರೂಪಿಸಿದರು. ಶಿಬಿರದಲ್ಲಿ 50 ವಿದ್ಯಾರ್ಥಿಗಳು, 5 ವಿದ್ಯಾರ್ಥಿನಿಯರು ಪ್ರಶಿಕ್ಷಣ ಪಡೆಯುತ್ತಿದ್ದಾರೆ.