ನವದೆಹಲಿ: ಭಾರತದ ಪ್ರಮುಖ ನಾಯಕರ ಹತ್ಯೆಗೆ ಸಂಚು ರೂಪಿಸಿದ್ದ ಇಸ್ಲಾಮಿಕ್ ಸ್ಟೇಟ್ ಆತ್ಮಾಹುತಿ ದಾಳಿಕೋರನನ್ನು ರಷ್ಯಾ ಭದ್ರತಾ ಪಡೆಗಳು ಬಂಧಿಸಿದ್ದವು. ಇದೀಗ ಆತನ ವಿಚಾರಣೆಗೆ ಅವಕಾಶ ನೀಡುವಂತೆ ಭಾರತ ರಷ್ಯಾವನ್ನು ಕೇಳಿದೆ. ಇದರ ಜೊತೆಗೆ ಭಾರತದ ತನಿಖಾ ಸಂಸ್ಥೆಗಳು ಉಗ್ರನಿಂದ ಪಡೆಯಲು ಇಚ್ಛಿಸಿರುವ ಮಾಹಿತಿಯ ಬಗ್ಗೆ ಪ್ರಶ್ನೆಗಳನ್ನು ಕಳಿಸಿಕೊಟ್ಟಿವೆ.
ಆಗಸ್ಟ್ 22ರಂದು ರಷ್ಯಾ ಭದ್ರತಾ ಪಡೆಗಳು ಉಜ್ಬೆಕ್ ಇಸ್ಲಾಮಿಕ್ ಸ್ಟೇಟ್ ಸಂಘಟನೆಗೆ ಸೇರಿದ ಅಝಮೊವ್ ಎಂಬಾತನನ್ನು ಬಂಧಿಸಿತ್ತು. ಇನ್ನು ಈತನ ಜೊತೆಗೆ ಬಂದಿದ್ದ ಕಿರ್ಗಿಸ್ತಾನದ ಪ್ರಜೆಯನ್ನು ಟರ್ಕಿಯಲ್ಲಿ ಹತ್ಯೆ ಮಾಡಲಾಗಿತ್ತು. ಆತ ಭಾರತದ ಮೇಲಿನ ದಾಳಿಗೆ ಹಿಂದೆಟ್ಟು ಹಾಕಿದ್ದಕ್ಕೆ ಆತನನ್ನು ಕೊಲೆ ಮಾಡಲಾಗಿದೆ ಎಂದು ರಷ್ಯಾದ ಕೇಂದ್ರಿಯ ತನಿಖಾ ಸೇವೆಯ ಅಧಿಕಾರಿಗಳು ತಿಳಿಸಿದ್ದಾರೆ.
ಭದ್ರತೆ ವಿಚಾರವಾಗಿ ಭಾರತದ ತನಿಖೆ ಸಂಸ್ಥೆಗಳು ಆರಂಭದಿಂದಲೂ ರಷ್ಯಾ ಮತ್ತು ಉಜ್ಬೆಕಿಸ್ತಾನ್ ತನಿಖಾ ಸಂಸ್ಥೆಗಳ ಜೊತೆ ಸಂಪರ್ಕದಲ್ಲಿತ್ತು. ಇದೀಗ ಭಾರತದ ಮೇಲೆ ದಾಳಿ ನಡೆಸುವ ಸಂಚು ಬಯಲಾಗಿರುವುದರಿಂದ ಉಗ್ರ ಅಝಮೊವ್ ನ ನೇರ ವಿಚಾರಣೆಗೆ ಅವಕಾಶ ಕೋರಿವೆ.
ಪ್ರವಾದಿ ಮೊಹಮ್ಮದ್ ಪೈಗಂಬರ್ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರ ಹತ್ಯೆಯ ಜವಾಬ್ದಾರಿಯನ್ನು ಅಝಮೊವ್ ಗೆ ನೀಡಲಾಗಿತ್ತು.