ನವದೆಹಲಿ: ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಗುರುವಾರ ಅಖಿಲ ಭಾರತ ಇಮಾಮ್ ಸಂಘದ ಮುಖ್ಯಸ್ಥ ಇಮಾಮ್ ಉಮರ್ ಇಲ್ಯಾಸಿ ಅವರನ್ನು ಭೇಟಿಯಾದರು. ಕಸ್ತೂರ ಬಾ ಮಾರ್ಗದಲ್ಲಿನ ಮಸೀದಿಯಲ್ಲಿ ಸುಮಾರು ಒಂದು ಗಂಟೆಗಳ ಕಾಲ ಹಿಂದೂ ಹಾಗೂ ಮುಸ್ಲಿಂ ಸಂಘದ ಮುಖ್ಯಸ್ಥರ ಗೌಪ್ಯ ಸಭೆ ನಡೆದಿದ್ದು, ತೀವ್ರ ಕುತೂಹಲ ಮೂಡಿಸಿದೆ.
ಮೋಹನ್ ಭಾಗವತ್ ಅವರೊಂದಿಗೆ ಆರ್ ಎಸ್ ಎಸ್ ಹಿರಿಯ ಮುಖಂಡರಾದ ಕೃಷ್ಣ ಗೋಪಾಲ್, ರಾಮ್ ಲಾಲ್ ಮತ್ತು ಇಂದ್ರೇಶ್ ಕುಮಾರ್ ಕೂಡಾ ಸಭೆಯಲ್ಲಿ ಪಾಲ್ಗೊಂಡರು. ಕೋಮು ಸೌಹಾರ್ದತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಮುಸ್ಲಿಂ ಚಿಂತಕರೊಂದಿಗೆ ಆರ್ ಎಸ್ ಎಸ್ ಮುಖ್ಯಸ್ಥರು ಚರ್ಚೆ ನಡೆಸಿದ್ದಾರೆ.
ಆರ್ ಎಸ್ ಎಸ್ ಸರ ಸಂಘ ಸಂಚಾಲಕರು ಸಮಾಜದ ಎಲ್ಲಾ ವರ್ಗದ ಜನರನ್ನು ಭೇಟಿ ಮಾಡುತ್ತಾರೆ. ಇದು ಸಾಮಾನ್ಯ ಸಂವಾದ ಪ್ರಕ್ರಿಯೆಯ ಮುಂದುವರಿಕೆಯ ಭಾಗವಾಗಿದೆ ಎಂದು ಆರ್ ಎಸ್ ಎಸ್ ಪ್ರಚಾರ ಪ್ರಮುಖ ಸುನೀಲ್ ಅಂಬೇಡ್ಕರ್ ಹೇಳಿದ್ದಾರೆ.