ಕಾಸರಗೋಡು: ಜಿಲ್ಲೆಯ ಕ್ರೀಡಾ ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಲು ಸಕಾಲದಲ್ಲಿ ಕ್ರಮ ಕೈಗೊಳ್ಳಲು ಜಿಲ್ಲಾ ಕ್ರೀಡಾ ಪರಿಷತ್ತಿನ ಮಹಾಸಭೆಯಲ್ಲಿ ನಿರ್ಣಯಿಸಲಾಗಿದೆ.
ಜಿಲ್ಲೆಯಲ್ಲಿ ಕ್ರೀಡಾ ಪ್ರಗತಿಗೆ ಮೂಲ ಸೌಕರ್ಯಗಳ ಕೊರತೆ ಅಡ್ಡಿಯಾಗುತ್ತಿದೆ ಎಂದು ಸಭೆ ನಿರ್ಣಯಿಸಿತು. ಕ್ರೀಡಾ ಪಟುಗಳನ್ನು ರಾಷ್ಟ್ರ ಮಟ್ಟಕ್ಕೆ ಬೆಳೆಸುವ ಅಕಾಡೆಮಿಗಳಿಗೆ ಸರಕಾರ ಅನುದಾನ ನೀಡಬೇಕು. ಪ್ರತಿ ಪಂಚಾಯಿತಿಯಲ್ಲಿ ಭೌತಿಕ ಸ್ಥಿತಿಗತಿ ಹೆಚ್ಚಿಸಿ ಕ್ರೀಡಾ ಅಭಿವೃದ್ಧಿ ಹಾಗೂ ಕ್ರೀಡಾ ಚಟುವಟಿಕೆ ಆರಂಭಿಸಲು ಕ್ರಮಕೈಗೊಳ್ಳಲಾಗುವುದು. ಎಲ್ಲ ನಗರÀಸಭೆ ಮತ್ತು ಪಂಚಾಯಿತಿಗಳಲ್ಲಿ ಮುಕ್ತ ವ್ಯಾಯಾಮ ಶಾಲೆ ಆರಂಭಿಸುವ ಗುರಿ ಹೊಂದಲಾಗಿದೆ. ಜಿಲ್ಲೆಯ ಕ್ರೀಡಾ ಪಟುಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ತರಲು ಕ್ರಮ ಕೈಗೊಳ್ಳಲಾಗುವುದು. ದೇಶದ ಕ್ರೀಡಾ ಭೂಪಟದಲ್ಲಿ ಕಾಸರಗೋಡಿಗೆ ನಿರ್ಣಾಯಕ ಸ್ಥಾನ ಸಿಗುವಂತೆ ಕ್ರೀಡಾ ಪಟುಗಳನ್ನು ಸಕ್ರಿಯಗೊಳಿಸುವುದು ಇದರ ಉದ್ದೇಶವಾಗಿದೆ. ಮುಂದಿನ ತಿಂಗಳು ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾ ಕ್ರೀಡಾ ಮಂಡಳಿ ಸ್ವಂತ ಕಟ್ಟಡ ಉದ್ಘಾಟನೆ ಮಾಡಲಿದೆ. ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‍ನ ಬೆಂಬಲದೊಂದಿಗೆ ವಿದ್ಯಾನಗರದಲ್ಲಿ ಈಜುಕೊಳ ನಿರ್ಮಾಣ ಅಂತಿಮ ಹಂತದಲ್ಲಿದೆ. ಎಚ್ ಎಎಲ್ ಸಾಮಾಜಿಕ ಹೊಣೆಗಾರಿಕೆ ನಿಧಿಯಿಂದ ಒಳಾಂಗಣ ವಾಲಿಬಾಲ್ ಮೈದಾನ ಆರಂಭಿಸುವ ಯೋಜನೆಯೂ ಇದೆ.
ಪಂಚಾಯತ್ ಸ್ಪೋಟ್ರ್ಸ್ ಕೌನ್ಸಿಲ್‍ಗಳ ಸ್ಥಾಪನೆಯೊಂದಿಗೆ, ಪ್ರತಿ ಪಂಚಾಯತ್‍ನಲ್ಲಿ ಸಮಗ್ರ ಕ್ರೀಡಾ ಅಭಿವೃದ್ಧಿಯನ್ನು ಸಕ್ರಿಯಗೊಳಿಸುವ ಗುರಿಯನ್ನು ಹೊಂದಿದೆ. ಪಂಚಾಯತ್ ಮತ್ತು ಮಹಾನಗರ ಪಾಲಿಕೆಗಳ ಕ್ರೀಡಾ ಚಟುವಟಿಕೆಗಳನ್ನು ಸಮನ್ವಯಗೊಳಿಸುವ ಜವಾಬ್ದಾರಿಯನ್ನು ಜಿಲ್ಲಾ ಕ್ರೀಡಾ ಮಂಡಳಿಗಳಿಗೂ ನೀಡಲಾಗಿದೆ.
ಸಭೆಯಲ್ಲಿ ಚೆರುವತ್ತೂರು ಕೆಸಿ ಥ್ರೋಬಾಲ್ ಅಕಾಡೆಮಿಯ ತರಬೇತುದಾರ ಕೆ.ಸಿ.ಗಿರೀಶ್, ಶಾಟ್‍ಪುಟ್ ರಾಷ್ಟ್ರೀಯ ಚಿನ್ನದ ಪದಕ ವಿಜೇತೆ ಅನುಪ್ರಿಯಾ ಮತ್ತು ಡಿಸ್ಕಸ್ ಥ್ರೋ ಬೆಳ್ಳಿ ಪದಕ ವಿಜೇತ ಕೆ.ಸಿ.ಸರ್ವಣ್ ಅವರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಕ್ರೀಡಾ ಮಂಡಳಿ ಅಧ್ಯಕ್ಷ ಪಿ.ಹಬೀಬ್ ರಹಮಾನ್ ಬಹುಮಾನ ವಿತರಿಸಿದರು. ಜಿಲ್ಲಾಧಿಕಾರಿಗಳ ಸಮ್ಮೇಳನ ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್ ವಾರ್ಷಿಕ ಮಹಾಸಭೆ ಉದ್ಘಾಟಿಸಿದರು. ಜಿಲ್ಲಾ ಕ್ರೀಡಾ ಮಂಡಳಿ ಅಧ್ಯಕ್ಷ ಪಿ.ಹಬೀಬ್ ರಹಮಾನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸ್ಪೋಟ್ರ್ಸ್ ಕೌನ್ಸಿಲ್ ಕಾರ್ಯದರ್ಶಿ ಎಂ.ಎಸ್.ಸುಧೀಶ ಬೋಸ್ ಚಟುವಟಿಕೆ ವರದಿ ಹಾಗೂ ಆದಾಯ-ವೆಚ್ಚದ ಅಂಕಿ-ಅಂಶಗಳನ್ನು ಮಂಡಿಸಿದರು. ರಾಜ್ಯ ಕ್ರೀಡಾ ಮಂಡಳಿಯ ನಾಮನಿರ್ದೇಶಿತ ಸದಸ್ಯ ಟಿ.ವಿ.ಬಾಲನ್ ನಿರ್ಣಯ ಮಂಡಿಸಿದರು. ಜಿಲ್ಲಾ ವಾರ್ತಾ ಅಧಿಕಾರಿ ಎಂ.ಮಧುಸೂದನನ್, ಹಣಕಾಸು ಅಧಿಕಾರಿ ಶಿವಪ್ರಕಾಶನ್ ನಾಯರ್, ಜಿಲ್ಲಾ ಕ್ರೀಡಾ ಮಂಡಳಿಯ ಕಾರ್ಯಕಾರಿ ಸದಸ್ಯ ಪಿ.ಅನಿಲ್, ಪಳ್ಳ ನಾರಾಯಣನ್, ವಿ.ವಿ.ವಿಜಯಮೋಹನನ್, ಡಿವೈಎಸ್ಪಿ ವಿ.ಕೆ.ವಿಶ್ವಂಭರನ್ ಮಾತನಾಡಿದರು. ಜಿಲ್ಲಾ ಕ್ರೀಡಾ ಪರಿಷತ್ತಿನ ಉಪಾಧ್ಯಕ್ಷ ಟಿ.ಪಿ.ಅಶೋಕನ್ ಮಾಸ್ತರ್ ಸ್ವಾಗತಿಸಿ, ಕಾರ್ಯಕಾರಿ ಸದಸ್ಯ ಟಿ.ವಿ.ಕೃಷ್ಣನ್ ವಂದಿಸಿದರು.