ಮೈಸೂರು: ಅತ್ತ ಸರ್ಕಾರ ವತಿಯಿಂದ ನಾಡಹಬ್ಬ ದಸರಾಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಚಾಲನೆ ನೀಡಿ ಹೋದ ಬಳಿಕ ಇತ್ತ ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್ ನೆರವೇರಿದೆ.
ವಜ್ರಖಚಿತ ಸಿಂಹಾಸನದಲ್ಲಿ ಕುಳಿದ ಮೈಸೂರು ದೊರೆ ಯದುವೀರ್ ಒಡೆಯರ್ 7ನೇ ಬಾರಿ ಖಾಸಗಿ ದರ್ಬಾರ್ ನೆರವೇರಿಸಿದರು. ಮೈಸೂರು ಅರಮನೆಯಲ್ಲಿ ಕೂಡ ಎರಡು ವರ್ಷಗಳ ಬಳಿಕ ಖಾಸಗಿ ದರ್ಬಾರ್ ಅದ್ದೂರಿಯಾಗಿ ನಡೆದಿದೆ. ಸಿಂಹಾಸನಕ್ಕೆ ಪೂಜೆ ಸಲ್ಲಿಸಿದ ನಂತರ ವೇದ ಘೋಷಗಳೊಂದಿಗೆ ಪೂಜೆ ಸಲ್ಲಿಸಿ ಖಾಸಗಿ ದರ್ಬಾರ್ ನ್ನು ರಾಜರು ನೆರವೇರಿಸಿದರು. ಮೈಸೂರಿನ ರಾಜ ಪರಂಪರೆಯಂತೆ ಖಾಸಗಿ ದರ್ಬಾರ್ ನೆರವೇರಿತು.
ಈ ಮೂಲಕ ಅರಮನೆ ಒಳಾಂಗಣ ಪಾರಂಪರಿಕ ದಸರಾ ಕಾರ್ಯಕ್ರಮಗಳ ಆರಂಭಕ್ಕೆ ಚಾಲನೆ ದೊರೆತಿದೆ. ಅರಮನೆಯಲ್ಲಿ ನವರಾತ್ರಿಯಲ್ಲಿ ನಡೆಯುವ ಸಾಂಪ್ರದಾಯಿಕ ಧಾರ್ಮಿಕ ವಿಧಿ-ವಿಧಾನಗಳು 10 ದಿನಗಳ ಕಾಲ ನಡೆಯಲಿವೆ. ನವರಾತ್ರಿ ಮೊದಲ ದಿನವಾದ ಇಂದು ಮುಂಜಾನೆ 5.10ರಿಂದ 5.30ರೊಳಗೆ ದರ್ಬಾರ್ ಹಾಲ್‍ನಲ್ಲಿ ಜೋಡಿಸಲಾಗಿರುವ ಸಿಂಹಾಸನಕ್ಕೆ `ಸಿಂಹ’ ಜೋಡಣಾ ಕಾರ್ಯ ನಡೆಯಿತು. ನಂತರ ಬೆಳಿಗ್ಗೆ 8.05ರಿಂದ 8.55ರವರೆಗೆ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಚಾಮುಂಡಿತೊಟ್ಟಿಯಲ್ಲಿ ಕಂಕಣ ಧಾರಣೆ ನೆರವೇರಿತು.
ಬಳಿಕ ಚಾಮುಂಡಿತೊಟ್ಟಿಯಿಂದ ವಾಣಿವಿಲಾಸ ದೇವರ ಮನೆಗೆ ಕಂಕಣವನ್ನು ತಂದು ತ್ರಿಷಿಕಾ ಕುಮಾರಿ ಒಡೆಯರ್ ಅವರಿಗೆ ಕಂಕಣ ಧಾರಣೆ ಮಾಡಲಾಯಿತು. 9.30ಕ್ಕೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು ಸವಾರಿ ತೊಟ್ಟಿಗೆ ಆಗಮಿಸಿದೆ. 9.50ರಿಂದ 10.35ರೊಳಗೆ ಕಳಸ ಪೂಜೆ ಹಾಗೂ ಸಿಂಹಾರೋಹಣ ನೆರವೇರಿತು.
ಯದುವಂಶದವರು ಅರಮನೆಯಲ್ಲಿ ಶರನ್ನವರಾತ್ರಿಯ ವೇಳೆ ನಡೆಸಿಕೊಂಡು ಬಂದಿರುವ ಖಾಸಗಿ ದರ್ಬಾರ್‍ಗೆ ಅರಮನೆ ಸಜ್ಜಾಗಿದ್ದು, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಇದು 7ನೇ ವರ್ಷದ ದರ್ಬಾರ್ ಆಗಿದೆ.
ದರ್ಬಾರ್ ಮುಗಿದ ಬಳಿಕ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ, ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯ, ಶ್ರೀರಂಗಪಟ್ಟಣದ ಶ್ರೀರಂಗನಾಥ, ಉತ್ತನಹಳ್ಳಿ ಜ್ವಾಲಾಮುಖಿ ತ್ರಿಪುರ ಸುಂದರಿದೇವಿ, ಅರಮನೆಯ ಆವರಣದಲ್ಲಿರುವ ತ್ರಿನೇಶ್ವರ, ಕೋಡಿ ಸೋಮೇಶ್ವರ, ಕೋಟೆ ಆಂಜನೇಯಸ್ವಾಮಿ, ಗಣೇಶ ದೇವಾಲಯ, ಕೃಷ್ಣನ ದೇವಾಲಯ ಸೇರಿದಂತೆ 33 ದೇವಾಲಯಗಳಿಂದ ತಂದ ಪ್ರಸಾದ ಸೇವಿಸಿದ ನಂತರ ದರ್ಬಾರ್ ಅಂತಿಮಗೊಳ್ಳಲಿದೆ.