ನವದೆಹಲಿ: ಕಾಂಗ್ರೆಸ್ ಪಕ್ಷದಲ್ಲಿ ಸುಧಾರಣೆ ಬಯಸಿರುವ ಯುವ ಸದಸ್ಯರು, ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಅಭ್ಯರ್ಥಿಗಳು ಚುನಾಯಿತರಾದರೆ ಉದಯಪುರ ಘೋಷಣೆ ಜಾರಿಗೆ ತರುವ ವಾಗ್ದಾನಕ್ಕೆ ಬದ್ಧರಾಗಿರುವಂತೆ ಒತ್ತಾಯಿಸಿರುವ ಸಹಿ ಅಭಿಯಾನದ ಮನವಿಯನ್ನು ಹಿರಿಯ ನಾಯಕ, ಸಂಸದ ಶಶಿ ತರೂರ್ ಅನುಮೋದಿಸಿದ್ದಾರೆ.
ಮುಂಬರುವ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಈ ಮನವಿ ಎಂದು ಉಲ್ಲೇಖಿಸಿರುವ ಪ್ರತಿಯಲ್ಲಿ ಇದುವರೆಗೆ 650ಕ್ಕೂ ಹೆಚ್ಚು ಜನರು ಸಹಿ ಹಾಕಿದ್ದಾರೆ. ಈ ಮನವಿ ಪತ್ರದ ಸ್ಕ್ರೀನ್ ಶಾಟ್ ಅನ್ನು ತರೂರ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಈ ಮನವಿ ಪತ್ರದಲ್ಲಿ 'ಕಾಂಗ್ರೆಸ್ ಪಕ್ಷದ ಸದಸ್ಯರಾದ ನಾವು ನಮ್ಮ ರಾಷ್ಟ್ರದ ಭರವಸೆಗಳು ಮತ್ತು ಆಕಾಂಕ್ಷೆಗಳನ್ನು ಪ್ರತಿಬಿಂಬಿಸಲು ಪಕ್ಷ ಬಲಪಡಿಸುವ ಬಯಕೆ ಹೊಂದಿದ್ದೇವೆ' ಎಂದು ಉಲ್ಲೇಖಿಸಲಾಗಿದೆ. ಪಕ್ಷದ ಚಿಂತಕರ ಅಧಿವೇಶನದ ನಂತರ ಇದೇ ವರ್ಷದ ಮೇ 15ರಂದು ಹೊರಡಿಸಿದ 'ಉದಯ್‌ಪುರ ಘೋಷಣೆ'ಯಲ್ಲಿನ ಪ್ರಮುಖ ಅಂಶಗಳೂ ಅನುಷ್ಠಾನಕ್ಕೆ ಬರಬೇಕೆನ್ನುವ ಒತ್ತಾಯವೂ ಈ ಮನವಿಯಲ್ಲಿವೆ.
'ಪಕ್ಷದಲ್ಲಿ ರಚನಾತ್ಮಕ ಸುಧಾರಣೆಗಳನ್ನು ಬಯಸಿ ಅಖಿಲ ಭಾರತ ಮಟ್ಟದಲ್ಲಿ ಯುವ ಸದಸ್ಯರ ಗುಂಪು ಹಂಚಿಕೊಂಡಿರುವ ಈ ಮನವಿಯನ್ನು ನಾನು ಸ್ವಾಗತಿಸುತ್ತೇನೆ. ಈ ಮನವಿ ಅನುಮೋದಿಸಲು ಮತ್ತು ಅದನ್ನು ಮೀರಿ ಮುನ್ನಡೆಯಲು ನನಗೆ ಸಂತೋಷವಾಗಿದೆ' ಎಂದು ತರೂರ್ ಟ್ವೀಟ್ ಮಾಡಿದ್ದಾರೆ.
ಸೋನಿಯಾ ಭೇಟಿಯಾದ ತರೂರ್
ಸದ್ಯದಲ್ಲೇ ನಡೆಯಲಿರುವ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಅವರ ನಿವಾಸದಲ್ಲಿ ಪಕ್ಷದ ಹಿರಿಯ ನಾಯಕ ಶಶಿ ತರೂರ್ ಸೋಮವಾರ ಭೇಟಿಯಾಗಿ ಚರ್ಚಿಸಿದರು.
ಭೇಟಿಯ ವೇಳೆ ನಡೆದ ಮಾತುಕತೆಯ ವಿವರಗಳನ್ನು ಅವರು ಬಹಿರಂಗಪಡಿಸಿಲ್ಲ. ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ಜಾರ್ಖಂಡ್ ಉಸ್ತುವಾರಿ ಅವಿನಾಶ್ ಪಾಂಡೆ ಸಹ ಸೋನಿಯಾ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ, ರಾಜ್ಯದ ರಾಜಕೀಯ ಪರಿಸ್ಥಿತಿಯ ಬಗ್ಗೆ ಚರ್ಚಿಸಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಗೆ ಅಧಿಸೂಚನೆ ಇದೇ 22ರಂದು ಹೊರಡಿಸಲಾಗುತ್ತಿದೆ. ಚುನಾವಣೆಗೆ ಇದೇ 25ರಂದು ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ತರೂರ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಸೂಚನೆಗಳಿಗೆ ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಿರುವುದು ಪುಷ್ಟಿ ನೀಡಿದೆ.
ಪಕ್ಷದ ನೀತಿ ನಿರೂಪಣೆಯ ಪ್ರಮುಖ ಜಿ23 ಸದಸ್ಯರಲ್ಲಿ ತರೂರ್ ಕೂಡ ಒಬ್ಬರು. ಪಕ್ಷದ ನಾಯಕತ್ವ ಟೀಕಿಸುವುದರಲ್ಲಿ 'ಜಿ 23' ಮುಂಚೂಣಿಯಲ್ಲಿದೆ.