ನವದೆಹಲಿ: 'ಉಕ್ರೇನ್ ಬಿಕ್ಕಟ್ಟಿನ ನಡುವೆ ರಷ್ಯಾ ಮತ್ತು ಭಾರತ ರಕ್ಷಣಾ ಸಹಕಾರ ಆಬಾಧಿತತೆಯ ಖಾತ್ರಿಗೆ ಉಭಯರಾಷ್ಟ್ರಗಳು ಬದ್ಧವಾಗಿವೆ. ಬಾಹ್ಯ ಶಕ್ತಿಗಳು ಸೃಷ್ಟಿಸಿದ್ದ ಅಡೆತಡೆಗಳೂ ಗಣನೀಯವಾಗಿ ತಗ್ಗುತ್ತಿವೆ' ಎಂದು ರಷ್ಯಾ ರಾಯಭಾರಿ ಡೆನಿಸ್ ಅಲಿಪೊವ್ ಹೇಳಿದ್ದಾರೆ.
ಸುದ್ದಿ ಸಂಸ್ಥೆಯೊಂದಿಗೆ ಭಾನುವಾರ ಮಾತನಾಡಿದ ಅವರು, ಭಾರತಕ್ಕೆ ರಷ್ಯಾದ ಎಸ್-400 ಕ್ಷಿಪಣಿ ವ್ಯವಸ್ಥೆಯ ಪೂರೈಕೆಯು ನಿಗದಿತ ವೇಳಾಪಟ್ಟಿಯಂತೆಯೇ ಸರಾಗವಾಗಿ ಮುಂದುವರಿದಿದೆ ಎಂದರು.
ಭಾರತೀಯ ಸೇನೆಗೆ ಎಸ್-400 ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆ ಸೇರಿ ಪ್ರಮುಖ ಸೇನಾ ಸೌಲಭ್ಯಗಳು ಮತ್ತು ಯಂತ್ರಾಂಶಗಳ ಪೂರೈಕೆಯು ಉಕ್ರೇನ್ ಬಿಕ್ಕಟ್ಟಿನ ಕಾರಣ ವಿಳಂಬವಾಗಲಿದೆ ಎಂಬ ಆತಂಕದ ನಡುವೆ ಅಲಿಪೊವ್ ಅವರಿಂದ ಈ ಹೇಳಿಕೆಗಳು ಬಂದಿವೆ.
'ಬಾಹ್ಯ ಶಕ್ತಿಗಳು ಸೃಷ್ಟಿಸಿದ್ದ ಅಡೆತಡೆಗಳನ್ನು ಮೆಟ್ಟಿನಿಲ್ಲಲು, ಪರ್ಯಾಯ ಪಾವತಿಗಳು ಮತ್ತು ಸರಕು ಆಯ್ಕೆಗಳನ್ನು ಬಳಸಿಕೊಂಡು ವಾಸ್ತವಕ್ಕೆ ಹೊಂದಿಕೊಳ್ಳುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಉಭಯ ರಾಷ್ಟ್ರಗಳ ನಾಯಕರ ನಡುವೆ ಉತ್ತಮ ಸಂಬಂಧ, ಪರಸ್ಪರ ಹೊಂದಾಣಿಕೆ ಇದೆ. ಈ ವರ್ಷ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಭೇಟಿಯಾಗಿ ಪರಸ್ಪರ ಚರ್ಚಿಸುವ, ಸಂವಹನ ನಡೆಸುವ ಜತೆಗೆ ನಾಲ್ಕು ಬಾರಿ ದೂರವಾಣಿಯಲ್ಲಿ ಸಂಭಾಷಣೆ ನಡೆಸಿದ್ದಾರೆ' ಎಂದು ಅವರು ಹೇಳಿದರು.