ಕಾಸರಗೋಡು: ಭಾರತವನ್ನು ಆರ್ಥಿಕವಾಗಿ ಹಾಗೂ ಸೇನಾಪರವಾಗಿ ಬಲಿಷ್ಠಗೊಳಿಸುವಲ್ಲಿ ಪ್ರಬಲ ಆಡಳಿತಾಧಿಕಾರಿಯಾಗಿ ಪ್ರಧಾನಿ ನರೇಂದ್ರ ಮೋದಿ ಹೊರಹೊಮ್ಮಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ, ಹಿರಿಯ ಮುಖಂಡ ಸಿ.ಕೆ ಪದ್ಮನಾಭನ್ ತಿಳಿಸಿದ್ದಾರೆ. ಅವರು ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನಾಚರಣೆ ಅಂಗವಾಗಿ ಬಿಜೆಪಿ ಕಾಸರಗೋಡು ಜಿಲ್ಲಾಸಮಿತಿ ವತಿಯಿಂದ ಕಾಸರಗೋಡು ಟೌನ್‍ಬ್ಯಾಂಕ್ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ನರೇಂದ್ರ ಮೋದಿ ಅವರ ಜೀವನ ಚರಿತ್ರೆ ಕುರಿತಾದ ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರ ದೂರದರ್ಶಿತ್ವದ ಆಡಳಿತದಿಂದ ಇಂದು ಭಾರತ ವಿಶ್ವಗುರುವಿನ ಸ್ಥಾನಕ್ಕೆ ಬಂದು ನಿಂತಿದೆ. ಆರೆಸ್ಸೆಸ್ ಗರಡಿಯಲ್ಲಿ ಪಳಗಿದ ನರೇಂದ್ರ ಮೋದಿ ಅವರು ಸೇವೆಯನ್ನು ಮೈಗೂಡಿಸಿಕೊಂಡು ತಮ್ಮನ್ನು ದೇಶಕ್ಕಾಗಿ ಅರ್ಪಿಸಿಕೊಂಡ ಧೀಮಂತರಾಗಿದ್ದಾರೆ ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾ ಸಮಿತಿ ಉಪಾಧ್ಯಕ್ಷೆ ರೂಪವಾಣಿ ಆರ್. ಭಟ್ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಸಮಿತಿ ಸದಸ್ಯ ಎಂ. ಸಂಜೀವ ಶೆಟ್ಟಿ, ಮುಖಂಡರಾದ ಸುರೇಶ್ ಕುಮಾರ್ ಶೆಟ್ಟಿ, ಪ್ರಮಿಳಾ ಸಿ.ನಾಯ್ಕ್, ಎ.ವೇಲಾಯುಧನ್, ವಿಜಯ್‍ಕುಮಾರ್ ರೈ, ಸವಿತಾ ಟೀಚರ್, ಸತೀಶ್ಚಂದ್ರ ಭಂಡಾರಿ ಕೋಳಾರು ಉಪಸ್ಥಿತರಿದ್ದರು. ಮಹಿಳಾ ಮೋರ್ಚಾ ರಾಷ್ಟ್ರೀಯ ಸಮಿತಿ ಸದಸ್ಯೆ ಅಶ್ವಿನಿ ಎಂ. ಸ್ವಾಗತಿಸಿದರು. ಮನೋಜ್‍ಕುಮಾರ್ ವಂದಿಸಿದರು.
ಕಾಸರಗೋಡಿನಲ್ಲಿ ಪ್ರಧಾನಿ ನರೇಂದ್ರಮೋದಿ ಜೀವನಚರಿತ್ರೆಯ ಛಾಯಾಚಿತ್ರ ಪ್ರದರ್ಶನ
0
ಸೆಪ್ಟೆಂಬರ್ 20, 2022
Tags