ಮಂಗಳೂರು: ಕಡಲ ನಗರಿ ಮಂಗಳೂರಿಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಅಭಿವೃದ್ಧಿಯಲ್ಲಿ ಸಮುದ್ರ ಯೋಜನೆಗಳ ಮಹತ್ವ ದೊಡ್ಡದ್ದು ಎಂದು ಪ್ರತಿಪಾದಿಸಿದರು.
ನಗರದ ಗೋಲ್ಡ್ ಫಿಂಚ್ ಮೈದಾನದಲ್ಲಿ ಶುಕ್ರವಾರ ಮಧ್ಯಾಹ್ನ ಬೃಹತ್ ಸಮಾವೇಶದಲ್ಲಿ ಭಾಷಣ ಆರಂಭಿಸುತ್ತಿದ್ದಂತೆ ಸಮುದ್ರ ಯೋಜನೆಯ ಅಗತ್ಯತೆ ಬಗ್ಗೆ ಪ್ರಸ್ತಾಪಿಸಿದರು.
ರಾಷ್ಟ್ರದ ಸುರಕ್ಷತೆ ಮತ್ತು ಆರ್ಥಿಕತೆಗೆ ಸಮುದ್ರ ಯೋಜನೆ ಅತ್ಯಗತ್ಯ. ನವ ಮಂಗಳೂರು ಬಂದರು ಪ್ರಾಧಿಕಾರ (ಎನ್ಎಂಪಿಎ), ಮಂಗಳೂರು ರಿಫೈನರಿ ಆಯಂಡ್ ಪೆಟ್ರೋಕೆಮಿಕಲ್ಸ್ ಲಿ. (ಎಂಆರ್ಪಿಎಲ್) ಸಂಸ್ಥೆಗಳ 3,800 ಕೋಟಿ ರೂ. ವೆಚ್ಚದ ವಿವಿಧ ಯೋಜನೆಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ನೆರವೇರಿಸಲಾಗಿದೆ. ಭಾರತದ ಸಮುದ್ರದ ತಾಕತ್ತಿಗೆ ಮುಖ್ಯವಾದ ದಿನ ಇಂದು ಎಂದರು.
ಮಂಗಳೂರಲ್ಲಿ 3800 ಕೋಟಿ ರೂ. ಮೊತ್ತದ ಯೋಜನೆಗಳ ಲೋಕಾರ್ಪಣೆ, ಶಂಕುಸ್ಥಾಪನೆ, ಭೂಮಿ ಪೂಜೆ ಆಗಿದೆ. ಕರ್ನಾಟಕದಲ್ಲಿ ಈ ಯೋಜನೆಗಳ ಮೂಲಕ ಉದ್ಯೋಗ ಸೃಷ್ಟಿಯಾಗಲಿದೆ. ವ್ಯಾಪಾರ ವಹಿವಾಟು ಹೆಚ್ಚಾಗಲಿದೆ. ಈ ಮೂಲಕ ಮೀನುಗಾರರು ತಮ್ಮ ಮಾರ್ಕೆಟ್ ವಿಸ್ತರಣೆ ಮಾಡಿಕೊಳ್ಳಲು ಸಹಾಯ ಆಗತ್ತೆ. ಮೇಕ್ ಇನ್ ಇಂಡಿಯಾ ವಿಸ್ತರಿಸುವುದು ಬಹಳ ಪ್ರಮುಖವಾದದ್ದು. ಕರಾವಳಿ ಪ್ರದೇಶಗಳಲ್ಲಿ ಸಾಗರಮಾಲಾ ಯೋಜನೆ ಅಡಿಯಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲಾಗತ್ತೆ. ಕಳೆದ ಎಂಟು ವರ್ಷದಲ್ಲಿ ಬಂದರು ವಹಿವಾಟು ಹೆಚ್ಚಾಗಿದೆ. ಮುಂದಿನ ವರ್ಷಗಳಲ್ಲಿ ಬಂದರುಗಳ ಕೆಪಾಸಿಟಿ ಹೆಚ್ಚಳ ಮಾಡಲಾಗತ್ತೆ ಎಂದು ಪ್ರಧಾನಿ ಹೇಳಿದರು.
ಕರ್ನಾಟಕದಲ್ಲಿ 8 ಲಕ್ಷ ಮನೆಗಳನ್ನ ನಿರ್ಮಾಣ ಮಾಡಲಾಗ್ತಿದೆ. ಜಲ ಜೀವನ್ ಮಿಷನ್ ಯೋಜನೆಯಲ್ಲಿ ಮನೆ ಮನೆಗೆ ನೀರು ಕಲ್ಪಿಸುವ ಯೋಜನೆ ಮಾಡಲಾಗಿದೆ. 30 ಲಕ್ಷ ಮನೆಗಳಿಗೆ ಜಲಜೀವನ್ ಯೋಜನೆ ಅಡಿ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಡಬಲ್ ಇಂಜಿನ್ ಸರ್ಕಾರದ ಕುರಿತು ನನಗೆ ಖುಷಿ ಇದೆ. ಕರ್ನಾಟಕದ ಡಬಲ್ ಇಂಜಿನ್ ಸರ್ಕಾರ ತೀವ್ರಗತಿಯಲ್ಲಿ ಅಭಿವೃದ್ಧಿಯ ಕಾರ್ಯಕ್ರಮ ಮಾಡಲಿದೆ ಎಂದರು.
ರಾಣಿ ಅಬ್ಬಕ್ಕ, ರಾಣಿ ಚೆನ್ನ ಭೈರಾದೇವಿ ಅವರನ್ನೂ ನೆನೆದ ಪ್ರಧಾನಿ ಮೋದಿ, ಬ್ರಿಟಿಷರಿಂದ ತಮ್ಮ ರಾಜ್ಯ ಉಳಿಸಿಕೊಳ್ಳಲು ಹೋರಾಡಿದ್ದು ನಮಗೆ ಸ್ಫೂರ್ತಿ. ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ಇವರ ಹೋರಾಟವನ್ನು ನೆನೆಯುತ್ತೇನೆ ಎಂದಾಗ ಸಭಿಕರು ಜೋರಾಗಿ ಚಪ್ಪಾಳೆ ತಟ್ಟಿದರು.
ಸಾಗರಮಾಲ ಯೋಜನೆಯ ದೊಡ್ಡ ಫಲಾನುಭವಿ ಆಗಲಿದೆ ಕರ್ನಾಟಕ. ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್, ಬೆಂಗಳೂರು -ಮೈಸೂರು ಎಕ್ಸ್‌ಪ್ರೆಸ್… ಹೀಗೆ ಹಲವು ಯೋಜನೆಗಳನ್ನ ರಸ್ತೆ ಮಾರ್ಗಕ್ಕಾಗಿ ಮಾಡಲಾಗ್ತಿದೆ ಎಂದರು.