ತಿರುವನಂತಪುರ: ಕೋವಿಡ್ ಲಸಿಕೆಯ ಅಡ್ಡ ಪರಿಣಾಮದಿಂದ ಮೃತಪಟ್ಟವರನ್ನು ಗುರುತಿಸಲು ನೀತಿಯೊಂದನ್ನು ತ್ವರಿತವಾಗಿ ರೂಪಿಸುವಂತೆ ಹಾಗೂ ಅವರ ಕುಟುಂಬಕ್ಕೆ ಪರಿಹಾರ ನೀಡುವಂತೆ ಕೇರಳ ಉಚ್ಚ ನ್ಯಾಯಾಲಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಎಂಎ)ಕ್ಕೆ ನಿರ್ದೇಶಿಸಿದೆ.
ಅಗತ್ಯ ಇರುವುದನ್ನು ಸಾಧ್ಯವಾದಷ್ಟು ತ್ವರಿತವಾಗಿ ಮಾಡಿ. ಆದರೆ, ತನ್ನ ಆದೇಶದ ದಿನಾಂಕವಾದ ಸೆಪ್ಟಂಬರ್ 1ರಿಂದ ಮೂರು ತಿಂಗಳ ಒಳಗೆ ಮಾಡಿ ಎಂದು ನ್ಯಾಯಮೂರ್ತಿ ವಿ.ಜಿ. ಅರುಣ್ ಅವರು ಎನ್‌ಡಿಎಂಎಗೆ ನಿರ್ದೇಶಿಸಿದ್ದಾರೆ.
ಕೋವಿಡ್ ಲಸಿಕೆಯ ಅಡ್ಡ ಪರಿಣಾಮಗಳಿಂದ ಜನರು ಬಲಿಯಾಗಿದ್ದಾರೆ ಎಂದು ಹೇಳುವ ಮೂರು ಪ್ರಕರಣಗಳು ತನ್ನ ನ್ಯಾಯ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿವೆ ಎಂದು ತಿಳಿಸಿದ ಬಳಿಕ ನ್ಯಾಯಮೂರ್ತಿ ಅರುಣ್ ಅವರು ನಿರ್ದೇಶನ ನೀಡಿದರು.
ಪ್ರಕರಣಗಳ ಸಂಖ್ಯೆ ತುಂಬಾ ಕಡಿಮೆ ಇದ್ದರೂ ಕೋವಿಡ್ ಲಸಿಕೆ ಪಡೆದುಕೊಂಡ ಜನರು ಅಡ್ಡ ಪರಿಣಾಮಗಳಿಗೆ ಬಲಿಯಾದ ಘಟನೆಗಳು ಇವೆ. ಎನ್‌ಡಿಎಂಎ ಹಾಗೂ ಆರೋಗ್ಯ ಸಚಿವಾಲಯಗಳು ಇಂತಹ ಪ್ರಕರಣಗಳನ್ನು ಗುರುತಿಸುವುದಕ್ಕಾಗಿ ನೀತಿ ರೂಪಿಸಲು ಹಾಗೂ ಸಂತ್ರಸ್ತರ ಕುಟುಂಬಕ್ಕೆ ಪರಿಹಾರ ನೀಡಲು ಬದ್ಧವಾಗಿವೆ ಎಂದು ನ್ಯಾಯಾಲಯ ಹೇಳಿದೆ.