ನವದೆಹಲಿ: ಕೋವಿಡ್‌ನ ಗಂಭೀರ ಪ್ರಕರಣಗಳ ಚಿಕಿತ್ಸೆಯಲ್ಲಿ ಆಯುರ್ವೇದ, ಯೋಗ ಪರಿಣಾಮಕಾರಿ ಆಗಿರಲಿದೆ ಎಂದು ನವದೆಹಲಿಯ ಐಐಟಿ ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ. ಹರಿದ್ವಾರದ ದೇವ್ ಸಂಸ್ಕೃತಿ ವಿಶ್ವವಿದ್ಯಾಲಯ ಸಹಯೋಗದಲ್ಲಿ ಸಮೀಕ್ಷೆ ನಡೆದಿತ್ತು.
ಕೋವಿಡ್ ಗಂಭೀರ ಪರಿಣಾಮಕ್ಕೆ ಗುರಿಯಾಗಿದ್ದ 30 ಪ್ರಕರಣಗಳಲ್ಲಿ ಯಶಸ್ವಿ ಚಿಕಿತ್ಸೆ ನೀಡಿರುವುದಕ್ಕೆ ಸಂಬಂಧಿಸಿದ ವರದಿಗಳನ್ನು 'ಟ್ರೆಡಿಷನಲ್ ನಾಲೆಡ್ಜ್' ನಿಯತಕಾಲಿಕದಲ್ಲಿ ಪ್ರಕಟಿಸಲಾಗಿದೆ. ಕೋವಿಡ್ ಚಿಕಿತ್ಸೆಯ ಜೊತೆಗೆ ಯೋಗ ಮತ್ತು ಆಯುರ್ವೇದ ಚಿಕಿತ್ಸೆಯು ರೋಗಿಗಳು ತ್ವರಿತವಾಗಿ ಚೇತರಿಸಿಕೊಳ್ಳಲು ಸಹಕಾರಿಯಾಗಿದೆ ಎಂದು ವರದಿಯು ಪ್ರತಿಪಾದಿಸಿದೆ.
ಸಾಂಪ್ರದಾಯಿಕವಾದ ಭಾರತೀಯ ಚಿಕಿತ್ಸಾ ಪದ್ಧತಿ ಕುರಿತು ಉನ್ನತ ಅಧ್ಯಯನ ಸಂಸ್ಥೆಗಳು ವೈಜ್ಞಾನಿಕವಾಗಿ ಪರಿಶೀಲಿಸಬೇಕಾದ ಅಗತ್ಯವಿದೆ. ಅದರ ಆಧಾರದಲ್ಲಿ ರೂಪಿಸುವ ಸಮಗ್ರ ಚಿಕಿತ್ಸಾ ಕ್ರಮವು ಹೆಚ್ಚು ಪರಿಣಾಮ ಬೀರಬಹುದಾಗಿದೆ. ಜೊತೆಗೆ, ಕೋವಿಡ್ ಎದುರಿಸುವಲ್ಲಿ ಜನರಿಗೂ ಕೂಡ ಹೆಚ್ಚು ವಿಶ್ವಾಸಾರ್ಹ ಮಾಹಿತಿಯನ್ನು ಒದಗಿಸಬಹುದಾಗಿದೆ ಎಂದು ಅಭಿಪ್ರಾಯಪಟ್ಟಿದೆ.
ಮಾರ್ಗದರ್ಶಿ ಸೂತ್ರಗಳಿಗೆ ಅನುಸಾರ ನೀಡಲಾಗುವ ಚಿಕಿತ್ಸೆಯ ಜೊತೆಗೆ ರೋಗಿಗಳಿಗೆ ಆಯುರ್ವೇದ ಚಿಕಿತ್ಸೆ, ಟೆಲಿಮೆಡಿಸಿನ್, ವೈಯಕ್ತಿಕ ಚಿಕಿತ್ಸೆ, ಯೋಗ ಕುರಿತಂತೆಯೂ ರೋಗಿಗಳಿಗೆ ಶಿಫಾರಸು ಮಾಡಲಾಗುತ್ತದೆ.