HEALTH TIPS

ಯುಪಿಎ ಕಾಲದಲ್ಲಿ ಭಾರತದ ಆರ್ಥಿಕ ಚಟುವಟಿಕೆ ಸ್ಥಗಿತವಾಗಿತ್ತು: ನಾರಾಯಣಮೂರ್ತಿ

 

             ಅಹಮದಾಬಾದ್‌: 'ಭಾರತದಲ್ಲಿ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಕಾಂಗ್ರೆಸ್‌ ನೇತೃತ್ವದ ಯುಪಿಎ ಕಾಲದಲ್ಲಿ ಅಂದು ಮನಮೋಹನ್‌ ಸಿಂಗ್‌ ಅವರು ಸರಿಯಾದ ಸಮಯಕ್ಕೆ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲಿಲ್ಲ' ಎಂದು ಐಟಿ ಕ್ಷೇತ್ರದ ದಿಗ್ಗಜ ಸಂಸ್ಥೆ ಇನ್ಫೋಸಿಸ್‌ನ ಸಹ-ಸಂಸ್ಥಾಪಕ ಎನ್‌.ಆರ್ ನಾರಾಯಣ ಮೂರ್ತಿ ವಿಷಾದಿಸಿದ್ದಾರೆ.

                   'ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ - ಅಹಮದಾಬಾದ್ (ಐಐಎಂಎ)' ನಲ್ಲಿ ಶುಕ್ರವಾರ ನಡೆದ ಸಂವಾದದಲ್ಲಿ ಯುವ ಉದ್ಯಮಿಗಳು ಮತ್ತು ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿದ ಮೂರ್ತಿ, ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯಾಗಿರುವ ಚೀನಾಕ್ಕೆ ಭಾರತವನ್ನು ಪ್ರಬಲ ಪ್ರತಿಸ್ಪರ್ಧಿಯನ್ನಾಗಿ ಮಾಡುವ ಶಕ್ತಿ ಯುವ ಮನಸ್ಸುಗಳಲ್ಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

               'ನಾನು ಲಂಡನ್‌ನಲ್ಲಿ (2008 ಮತ್ತು 2012 ರ ನಡುವೆ) ಎಚ್‌ಎಸ್‌ಬಿಸಿಯ ಮಂಡಳಿಯಲ್ಲಿದ್ದೆ. ಮೊದಲ ಕೆಲವು ವರ್ಷಗಳಲ್ಲಿ, ಮಂಡಳಿಯ ಸಭೆಯಲ್ಲಿ ಚೀನಾವನ್ನು ಎರಡರಿಂದ ಮೂರು ಬಾರಿ ಉಲ್ಲೇಖಿಸಲಾಗುತ್ತಿತ್ತು. ಭಾರತದ ಹೆಸರನ್ನು ಒಮ್ಮೊಮ್ಮೆ ಮಾತ್ರ ಹೇಳಲಾಗುತ್ತಿತ್ತು. ದುರದೃಷ್ಟವಶಾತ್, ನಂತರ (ಭಾರತಕ್ಕೆ) ಏನಾಯಿತು ಎಂದು ನನಗೆ ಗೊತ್ತಿಲ್ಲ. (ಮಾಜಿ ಪ್ರಧಾನಿ) ಮನಮೋಹನ್ ಸಿಂಗ್ ಅವರು ಅಸಾಧಾರಣ ವ್ಯಕ್ತಿ ಮತ್ತು ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಆದರೆ, ಭಾರತವು (ಯುಪಿಎ ಅವಧಿಯಲ್ಲಿ) ಸ್ಥಗಿತಗೊಂಡಿತ್ತು. ಸೂಕ್ತ ನಿರ್ಧಾರಗಳನ್ನು ಸರಿಯಾದ ಸಮಯಕ್ಕೆ ತೆಗೆದುಕೊಳ್ಳಲೇ ಇಲ್ಲ. ಎಲ್ಲವೂ ತಡವಾಗಿಹೋಯಿತು‌' ಎಂದು ಮೂರ್ತಿ ಹೇಳಿದರು.

            ಎಚ್‌ಎಸ್‌ಬಿಸಿಯನ್ನು ತೊರೆಯುವ ಸಂದರ್ಭದಲ್ಲಿ (2012 ರಲ್ಲಿ) ನಡೆಯುತ್ತಿದ್ದ ಸಭೆಗಳಲ್ಲಿ ಭಾರತದ ಹೆಸರನ್ನು ಅಷ್ಟೇನೂ ಉಲ್ಲೇಖಿಸುತ್ತಿರಲಿಲ್ಲ. ಆದರೆ ಚೀನಾದ ಹೆಸರನ್ನು ಸುಮಾರು 30 ಬಾರಿ ಹೇಳಲಾಗುತ್ತಿತ್ತು ಎಂದಿದ್ದಾರೆ.

                 'ಜನರು ಇತರ ಯಾವುದೇ ದೇಶದ ಹೆಸರನ್ನು, ನಿರ್ದಿಷ್ಟವಾಗಿ ಚೀನಾವನ್ನು ಉಲ್ಲೇಖಿಸಿದಾಗ ಅಲ್ಲಿ ಭಾರತದ ಹೆಸರನ್ನು ನಮೂದಿಸುವಂತೆ ಮಾಡುವುದು ನಿಮ್ಮ (ಯುವ ಪೀಳಿಗೆ) ಜವಾಬ್ದಾರಿ ಎಂದು ನಾನು ಭಾವಿಸುತ್ತೇನೆ. ನೀವು ಅದನ್ನು ಸಾಧಿಸುತ್ತೀರೆಂದು ನಾನು ನಂಬುತ್ತೇನೆ' ಎಂದು ಮೂರ್ತಿ ತಮ್ಮ ನಿರೀಕ್ಷೆ ವ್ಯಕ್ತಪಡಿಸಿದರು.

            'ಬಹುಪಾಲು ಪಾಶ್ಚಿಮಾತ್ಯರು ಭಾರತವನ್ನು ಕೀಳಾಗಿ ನೋಡುತ್ತಿದ್ದ ಕಾಲವಿತ್ತು. ಆದರೆ ಇಂದು, ದೇಶದ ಬಗ್ಗೆ ಒಂದು ನಿರ್ದಿಷ್ಟ ಮಟ್ಟದ ಗೌರವವಿದೆ. ಭಾರತ ಈಗ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ' ಎಂದು ಮೂರ್ತಿ ಹೇಳಿದರು.

               '1991ರಲ್ಲಿ ಮನಮೋಹನ್ ಸಿಂಗ್ ಅವರು ಹಣಕಾಸು ಸಚಿವರಾಗಿದ್ದಾಗ ಕೈಗೊಂಡ ಆರ್ಥಿಕ ಸುಧಾರಣೆಗಳು ಮತ್ತು ಪ್ರಸ್ತುತ ಎನ್‌ಡಿಎ ಸರ್ಕಾರದ 'ಮೇಕ್ ಇನ್ ಇಂಡಿಯಾ' ಮತ್ತು 'ಸ್ಟಾರ್ಟ್‌ಅಪ್‌ ಇಂಡಿಯಾ' ಮುಂತಾದ ಯೋಜನೆಗಳು ದೇಶವನ್ನು ಮುನ್ನೆಲೆಗೆ ತರಲು ನೆರವಾಗಿವೆ' ಎಂದು ಅವರು ಹೇಳಿದರು.

            'ನಾನು ನಿಮ್ಮ ವಯಸ್ಸಿನಲ್ಲಿದ್ದಾಗ ಹೆಚ್ಚಿನ ಜವಾಬ್ದಾರಿ ಇರಲಿಲ್ಲ. ಏಕೆಂದರೆ ನನ್ನಿಂದಾಗಲಿ ಅಥವಾ ಭಾರತದಿಂದಾಗಲಿ ಹೆಚ್ಚು ನಿರೀಕ್ಷೆಗಳಿರಲಿಲ್ಲ. ಇಂದು, ನೀವು ದೇಶವನ್ನು ಮುನ್ನಡೆಸುತ್ತೀರಿ ಎಂಬ ನಿರೀಕ್ಷೆಯಿದೆ. ನೀವು ಭಾರತವನ್ನು ಚೀನಾದ ಪ್ರತಿಸ್ಪರ್ಧಿಯನ್ನಾಗಿ ಮಾಡಬಹುದು ಎಂದು ನಾನು ಭಾವಿಸುತ್ತೇನೆ' ಎಂದು ಮೂರ್ತಿ ಹೇಳಿದರು. ಕೇವಲ 44 ವರ್ಷಗಳಲ್ಲಿ ಚೀನಾ ಭಾರತಕ್ಕಿಂತ ಭಾರಿ ಮುಂದೆ ಸಾಗಿದೆ ಎಂದು ಸಾಫ್ಟ್‌ವೇರ್ ದಿಗ್ಗಜ ಮೂರ್ತಿ ಇದೇ ವೇಳೆ ಹೇಳಿದರು.

                 'ಚೀನಾ ಎಂದರೆ ಊಹಿಸಲು ಅಸಾಧ್ಯವಾದಂಥದ್ದು. ಅದು (ಚೀನೀ ಆರ್ಥಿಕತೆ) ಭಾರತಕ್ಕಿಂತ ಆರು ಪಟ್ಟು ದೊಡ್ಡದಾಗಿದೆ. 44 ವರ್ಷಗಳಲ್ಲಿ, 1978 ಮತ್ತು 2022 ರ ನಡುವೆ, ಚೀನಾ ಭಾರತವನ್ನು ತುಂಬಾ ಹಿಂದಕ್ಕೆ ತಳ್ಳಿದೆ. ಆರು ಪಟ್ಟು ಅಂದರೆ ತಮಾಷೆ ವಿಷಯವಲ್ಲ. ನೀವು ಏನನ್ನಾದರೂ ಮಾಡಿದರೆ, ಇಂದು ಚೀನಾಕ್ಕೆ ಸಿಗುತ್ತಿರುವ ಗೌರವ ಭಾರತಕ್ಕೂ ಸಿಗಲಿದೆ' ಎಂದು ಅವರು ಪ್ರತಿಪಾದಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries