ಪಣಜಿ: ರಾಜ್ಯ ಕಾಂಗ್ರೆಸ್ ಶಾಸಕಾಂಗ ಪಕ್ಷ (ಸಿಎಲ್‌ಪಿ)ವನ್ನು ಆಡಳಿತಾರೂಢ ಬಿಜೆಪಿಯಲ್ಲಿ ವಿಲೀನಗೊಳಿಸುವುದನ್ನು ಅಂಗೀಕರಿಸಿರುವುದಾಗಿ ಗೋವಾ ವಿಧಾನಸಭೆ ಸ್ಪೀಕರ್ ರಮೇಶ್ ತಾವಡ್ಕರ್ ಗುರುವಾರ ಹೇಳಿದ್ದಾರೆ.
'ಕಾಂಗ್ರೆಸ್ ಶಾಸಕರು ಸಲ್ಲಿಸಿದ ಪತ್ರವನ್ನು ಪರಿಶೀಲಿಸಿದಾಗ, ವಿಲೀನಕ್ಕೆ ಅಗತ್ಯವಿರುವ ಸಂಖ್ಯೆ ಅವರ ಬಳಿ ಇವೆ ಎಂಬುದು ಸಾಬೀತಾಗಿದೆ' ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಗೋವಾದ 11 ಕಾಂಗ್ರೆಸ್ ಶಾಸಕರ ಪೈಕಿ ಎಂಟು ಮಂದಿ ಶಾಸಕಾಂಗ ಪಕ್ಷವನ್ನು ಬಿಜೆಪಿಗೆ ವಿಲೀನಗೊಳಿಸುವ ನಿರ್ಣಯವನ್ನು ಬುಧವಾರ ಅಂಗೀಕರಿಸಿದ್ದಾರೆ.
ಗೋವಾದಲ್ಲಿ ಕಾಂಗ್ರೆಸ್‌ನ ಎಂಟು ಶಾಸಕರು ಬುಧವಾರ ಬಿಜೆಪಿ ಸೇರಿದ್ದಾರೆ. ಕಾಂಗ್ರೆಸ್‌ನಲ್ಲಿ ಮೂವರು ಶಾಸಕರಷ್ಟೇ ಉಳಿದಿದ್ದು, ವಿರೋಧ ಪಕ್ಷದ ಸ್ಥಾನ ವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಬಿಜೆಪಿ ಸೇರುವಾಗ ಕಾಂಗ್ರೆಸ್ ಶಾಸಕರು, 'ಕಾಂಗ್ರೆಸ್ ಬಿಡಿ, ಬಿಜೆಪಿ ಸೇರಿ' ಎಂದು ಘೋಷಣೆ ಕೂಗಿದ್ದಾರೆ. ಕಾಂಗ್ರೆಸ್‌ನ 'ಭಾರತವನ್ನು ಒಗ್ಗೂಡಿಸಿ ಯಾತ್ರೆ'ಯ ಮಧ್ಯೆಯೇ ನಡೆದಿರುವ ಈ ಬೆಳವಣಿಗೆಯಿಂದ ಪಕ್ಷಕ್ಕೆ ಭಾರಿ ಮುಜುಗರವಾಗಿದೆ.
ಕಾಂಗ್ರೆಸ್ ನಾಯಕ, ಮಾಜಿ ಮುಖ್ಯ ಮಂತ್ರಿ ದಿಗಂಬರ ಕಾಮತ್ ಮತ್ತು ಶಾಸಕ ಮೈಕೆಲ್ ಲೋಬೊ ನೇತೃತ್ವದಲ್ಲಿ ಕಾಂಗ್ರೆಸ್ ವಿಭಜನೆ ನಡೆದಿದೆ. ಬುಧ ವಾರ ಇಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ, ಪಕ್ಷವನ್ನು ಬಿಜೆಪಿ ಜತೆ ವಿಲೀನ ಮಾಡುವ ನಿರ್ಣಯವನ್ನು ಅಂಗೀಕರಿಸಲಾಯಿತು. ದೇವರ ಇಚ್ಛೆ ಯಂತೆ ಹೀಗೆ ಮಾಡಿದ್ದೇನೆ ಎಂದು ಕಾಮತ್ ಹೇಳಿದ್ದಾರೆ.