ತಿರುವನಂತಪುರ: ಭಾರತ್ ಜೋಡೊ ಯಾತ್ರೆಗೆ ದೇಣಿಗೆ ನೀಡಲಿಲ್ಲ ಎಂಬ ಕಾರಣಕ್ಕೆ ಕಾಂಗ್ರೆಸ್ ಕಾರ್ಯಕರ್ತರು ತರಕಾರಿ ವ್ಯಾಪಾರಿಯೊಬ್ಬರಿಗೆ ಬೆದರಿಕೆ ಹಾಕಿರುವ ಘಟನೆ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ನಡೆದಿದೆ.
ಕಾಂಗ್ರೆಸ್ ಕಾರ್ಯಕರ್ತರು ತರಕಾರಿ ವ್ಯಾಪಾರಿಗೆ ಬೆದರಿಕೆ ಹಾಕುತ್ತಿರುವ ವಿಡಿಯೊ ಮತ್ತು ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿವಾದಕ್ಕೆ ಕಾರಣವಾಗಿದೆ.
'ಘಟನೆಯಲ್ಲಿ ಭಾಗಿಯಾದ ಮೂವರು ಕಾರ್ಯಕರ್ತರನ್ನು ತಕ್ಷಣವೇ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ' ಎಂದು ಕೇರಳ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಕೆ. ಸುಧಾಕರನ್ ತಿಳಿಸಿದ್ದಾರೆ.
ಘಟನೆ ಕುರಿತು ಟ್ವೀಟ್ ಮಾಡಿರುವ ಅವರು, 'ಕೊಲ್ಲಂನಲ್ಲಿ ನಡೆದಿರುವ ಸ್ವೀಕಾರಾರ್ಹವಲ್ಲದ ಘಟನೆಯಲ್ಲಿ ಭಾಗಿಯಾಗಿರುವ ಪಕ್ಷದ ಮೂವರು ಕಾರ್ಯಕರ್ತರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ. ಬೆದರಿಕೆ ಹಾಕಿರುವುದು ಅಕ್ಷಮ್ಯ. ಇಂತಹ ನಡವಳಿಕೆ ಪಕ್ಷದ ಸಿದ್ಧಾಂತಕ್ಕೆ ವಿರುದ್ಧವಾಗಿದೆ' ಎಂದು ಹೇಳಿದ್ದಾರೆ.
'ಕಾಂಗ್ರೆಸ್ ಕಾರ್ಯಕರ್ತರ ಗುಂಪೊಂದು ಅಂಗಡಿ ಬಳಿ ಬಂದು ಭಾರತ್ ಜೋಡೊ ಯಾತ್ರೆಗೆ ದೇಣಿ ನೀಡುವಂತೆ ಕೇಳಿದರು. ನಾನು ₹500 ಅವರಿಗೆ ಕೊಟ್ಟಿದ್ದೆ. ಆದರೆ, ₹2,000 ನೀಡುವಂತೆ ಅವರು ಬೇಡಿಕೆಯಿಟ್ಟಿದ್ದರು. ನಾನು ಅಷ್ಟೊಂದು ಹಣ ನೀಡುವುದಕ್ಕೆ ನಿರಾಕರಿಸಿದೆ. ಕೂಡಲೇ ಅವರು ತಕ್ಕಡಿಯನ್ನು ಹೊರಗೆ ಎಸೆದು, ತರಕಾರಿಗಳನ್ನು ಚೆಲ್ಲಾಡಿದರು' ಎಂದು ತರಕಾರಿ ಅಂಗಡಿ ಮಾಲೀಕ ಎಸ್.ಫವಾಜ್ ಕುನ್ನಿಕೋಡು ತಿಳಿಸಿದ್ದಾರೆ.
ಬೇಡಿಕೆಯ ಮೊತ್ತವನ್ನು ನೀಡದಿದ್ದರೆ ಯಾರನ್ನೂ ಜೀವಂತವಾಗಿ ಬಿಡುವುದಿಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತರು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಘಟನೆ ಬಳಿಕ ಫವಾಜ್ ಪೊಲೀಸರಿಗೆ ದೂರು ನೀಡಿದ್ದಾರೆ.
ಕೇರಳದ ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಅನೀಶ್ ಖಾನ್ ಸೇರಿದಂತೆ ಐವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.