ಬೆಂಗಳೂರು: ಸದ್ಯ ಭಾರತದ ಟೆಕ್ ಕ್ಷೇತ್ರದಲ್ಲಿ 'ಮೂನ್‌ಲೈಟಿಂಗ್' ಎಂಬ ಸಂಗತಿ ಬಹು ಚರ್ಚಿತ ವಿಷಯವಾಗಿದೆ.
ಉದ್ಯೋಗಿಗಳು ಮೂನ್‌ಲೈಟಿಂಗ್ ಮಾಡುತ್ತಿದ್ದಾರೆ ಎಂದು ಟೆಕ್ ಕಂಪನಿಗಳು ಕೆಂಗಣ್ಣು ಬೀರುತ್ತಿದ್ದರೇ ಸಾಮಾಜಿಕ ಜಾಲತಾಣಗಳಲ್ಲಿ ಟೆಕ್ಕಿಗಳು ಕಂಪನಿಗಳ ಈ ಆರೋಪವನ್ನು ತೀವ್ರವಾಗಿ ಖಂಡಿಸುತ್ತಿದ್ದಾರೆ.
ಇನ್ನೂ ಕೆಲವರು ಕಂಪನಿಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
ಹಾಗಾದರೆ ಮೂನ್‌ಲೈಟಿಂಗ್ ಎಂದರೇನು?
ಲಿಸ್ಟೆಡ್ ಕಂಪನಿಗಳಲ್ಲಿನ ನೌಕರರು ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ಕಡೆ ಕೆಲಸ ಮಾಡುವುದನ್ನು ಮೂನ್‌ಲೈಟಿಂಗ್ ಎಂದು ಕರೆಯಲಾಗುತ್ತದೆ. 'ಕಂಪನಿಗಳ ನೌಕರರ ನೀತಿ ಸಂಹಿತೆ ಪ್ರಕಾರ ಎರಡೂ ಕಡೆ ನೌಕರಿ ಮಾಡಲು ಅವಕಾಶ ಇಲ್ಲ.
ಕೊರೊನಾ ನಂತರ ಅನೇಕ ಕಂಪನಿಗಳು ಮನೆಯಿಂದ ಕೆಲಸ ಮಾಡುವ ಆಯ್ಕೆ ಕೊಟ್ಟಿವೆ. ಇನ್ನೂ ಕೆಲ ಕಂಪನಿಗಳು ಖಾಯಂ ವರ್ಕ್ ಫ್ರಮ್ ಹೋಮ್ ಕೊಟ್ಟಿವೆ. ಈ ನಂತರ ಮೂನ್‌ಲೈಟ್ ಮಾಡುತ್ತಿರುವರ ಸಂಖ್ಯೆ ಹೆಚ್ಚಾಗುತ್ತಿದೆ ಎಂಬುದು ಟೆಕ್ ಕಂಪನಿಗಳ ಆರೋಪವಾಗಿದೆ.
ಭಾರತೀಯ ಟೆಕ್ ದೈತ್ಯರಾದ ಇನ್ಫೊಸಿಸ್, ವಿಪ್ರೊ ಈ ಬಗ್ಗೆ ತನ್ನ ನೌಕರರ ಮೇಲೆ ಅಧಿಕೃತವಾಗಿ ಕೆಂಗೆಣ್ಣು ಬೀರಿದ್ದು ಕ್ರಮ ಕೈಗೊಳ್ಳುವ ಎಚ್ಚರಿಕೆಯ ಸಂದೇಶ ಕೂಡ ರವಾನಿಸಿವೆ. ಐಬಿಎಂ ಕೂಡ ಮೂನ್‌ಲೈಟಿಂಗ್ 'ಅನೈತಿಕ' ಎಂದು ಅಭಿಪ್ರಾಯಪಟ್ಟಿದೆ.
ತನ್ನ ನೌಕರರಿಗೆ ಪತ್ರವೊಂದನ್ನು ರವಾನಿಸಿರುವ ಐ.ಟಿ. ಸೇವಾ ಕಂಪನಿ ಇನ್ಫೊಸಿಸ್, ಎರಡು ಕಡೆ ಕೆಲಸ ಮಾಡುವುದಕ್ಕೆ ಕಂಪನಿಯ ನಿಯಮಗಳಲ್ಲಿ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದೆ.
ಗುತ್ತಿಗೆ ಒಪ್ಪಂದವನ್ನು ಉಲ್ಲಂಘಿಸಿ ಮೂನ್‌ಲೈಟಿಂಗ್ ಮಾಡಿದರೆ, ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ. ಶಿಸ್ತು ಕ್ರಮ ಅಂದರೆ ನೌಕರಿಯಿಂದ ವಜಾಗೊಳಿಸುವುದೂ ಸೇರಿದೆ ಎಂದು ಇನ್ಫೊಸಿಸ್ ನೌಕರರಿಗೆ ಎಚ್ಚರಿಕೆ ನೀಡಿದೆ.
'ಮೂನ್‌ಲೈಟಿಂಗ್ ಅಂದರೆ ಕೆಲಸದ ಅವಧಿಯಲ್ಲಿ ಅಥವಾ ಕೆಲಸದ ಅವಧಿಯ ನಂತರದಲ್ಲಿ ಇನ್ನೊಂದು ಕಡೆ ಕೆಲಸ ಮಾಡುವುದು. ಇಂತಹ ಪ್ರವೃತ್ತಿಯನ್ನು ಇನ್ಫೊಸಿಸ್ ಪ್ರೋತ್ಸಾಹಿಸುವುದಿಲ್ಲ' ಎಂದು ನೌಕರರಿಗೆ ಕಂಪನಿಯು ಹೇಳಿದೆ.
ವಿಪ್ರೊ ಕಂಪನಿಯ ಅಧ್ಯಕ್ಷ ರಿಷದ್ ಪ್ರೇಮ್‌ಜಿ ಅವರು ಮೂನ್‌ಲೈಟಿಂಗ್‌ಅನ್ನು 'ಮೋಸ ಮಾಡುವುದು' ಎಂದು ಕರೆದ ನಂತರದಲ್ಲಿ, ಇದು ಚರ್ಚೆಯ ವಸ್ತುವಾಗಿದೆ. ಮೂನ್‌ಲೈಟಿಂಗ್ ವಿಚಾರವಾಗಿ ಸಾರ್ವಜನಿಕ ವಲಯದಲ್ಲಿ ಚರ್ಚೆಗಳು ನಡೆದಿವೆ, ಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿವೆ, ಕಾನೂನು ಪ್ರಶ್ನೆಗಳು ಕೂಡ ಉದ್ಭವಿಸಿವೆ.
ಟೆಕ್ ಕಂಪನಿಗಳ ಈ ನಡೆಗೆ ಪುಣೆ ಮೂಲದ, ಐ.ಟಿ. ಉದ್ಯೋಗಿಗಳ ಸಂಘ NITES ವಿರೋಧ ವ್ಯಕ್ತಪಡಿಸಿದೆ. 'ಇದು ಬೆದರಿಸುವ ನಡೆ' ಎಂದು ಹೇಳಿದೆ. ವಾಸ್ತವದಲ್ಲಿ ಮೂನ್‌ಲೈಟಿಂಗ್‌ನಲ್ಲಿ ತೊಡಗಲು ಆಗುವುದಿಲ್ಲ ಎಂದು ಅದು ಹೇಳಿದೆ.
'ಯಾವುದೇ ಕಂಪನಿ ಸೇರಲು ಆಧಾರ್ ಹಾಗೂ ಪ್ಯಾನ್ ಸಂಖ್ಯೆ ಕಡ್ಡಾಯ. ಆಧಾರ್ ಸಂಖ್ಯೆಯು ಪಿಎಫ್ ಖಾತೆಗೆ ಜೋಡಣೆ ಆಗಿರುತ್ತದೆ. ಎರಡು ಕಂಪನಿಗಳು ಒಂದೇ ವ್ಯಕ್ತಿಗೆ ಒಂದೇ ತಿಂಗಳಿನಲ್ಲಿ ಪಿಎಫ್ ನೀಡಲು ಸಾಧ್ಯವಿಲ್ಲ' ಎಂದು ಸಂಘದ ಅಧ್ಯಕ್ಷ ಹರ್‌ಪ್ರೀತ್ ಸಿಂಗ್ ಸಲುಜಾ ಹೇಳಿದ್ದಾರೆ.
'ಕೆಲಸದ ಅವಧಿಯ ನಂತರದಲ್ಲಿ ನೌಕರರು ಏನು ಮಾಡುತ್ತಾರೆ ಎಂಬುದು ಅವರ ಪರಮಾಧಿಕಾರ' ಎಂದು ಕೂಡ ಸಂಘ ಹೇಳಿದೆ.
ಆಯೂಷಿ ಆನಂದ್ ಎನ್ನುವ ಮಹಿಳಾ ಟೆಕ್ಕಿ ಒಬ್ಬರು, 'ಉದ್ಯೋಗಿಗಳು ತಮ್ಮ ಕೆಲಸದ ಅವಧಿ ಬಿಟ್ಟು ಬೇರೆ ಸಮಯದಲ್ಲಿ ಏನು ಮಾಡಬೇಕು? ಎಂಬುದನ್ನು ಕಂಪನಿಗಳು ಹೇಳಬಹುದಾ? ಮೂನ್‌ಲೈಟ್‌ನ್ನು ನಕಾರಾತ್ಮಕವಾಗಿ ನೋಡಬಾರದು, ವೃತ್ತಿ ಪೃವೃತ್ತಿಯ ಬಗ್ಗೆ ಫ್ಯಾಶನ್ ಇದ್ದವರನ್ನು ಅವಮಾನ ಮಾಡಬಾರದು ಎಂದಿದ್ದಾರೆ.
ಶುಭಂ ಜೈನ್ ಎನ್ನುವ ಸಾಫ್ಟವೇರ್ ಎಂಜಿನಿಯರ್ ಒಬ್ಬರು ಇನ್ಫೊಸಿಸ್ ಏನು ಹೇಳಲು ಹೊರಟಿದೆ? ಕಂಪನಿ ಕೆಲಸದಾಚೆ ಉದ್ಯೋಗಿ ಬೇರೇನು ಮಾಡಬಾರದು ಎನ್ನಲು ಇವರಾರು? ಅಷ್ಟಕ್ಕೂ ಅನೇಕ ಟೆಕ್ ಕಂಪನಿಗಳು ಜನ್ಮತಾಳಿದ್ದು ಆ ಕಂಪನಿಗಳ ಸ್ಥಾಪಕರ ಮೂನ್‌ಲೈಟಿಂಗ್‌ನಲ್ಲಿ ಎಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.