ರೇಣಿಗುಂಟ: ತಿರುಪತಿ ಜಿಲ್ಲೆಯ ರೇಣಿಗುಂಟದ ಖಾಸಗಿ ಆಸ್ಪತ್ರೆಯಲ್ಲಿ ಅಗ್ನಿಅವಘಡ ಸಂಭವಿಸಿದ್ದು, ವೈದ್ಯರೊಬ್ಬರು ಸಜೀವ ದಹನವಾಗಿದ್ದಾರೆ. ಇವರ ಇಬ್ಬರು ಮಕ್ಕಳು ಕೂಡ ಮೃತಪಟ್ಟಿದ್ದಾರೆ.
ಡಾ.ರವಿಶಂಕರರೆಡ್ಡಿ(47) ಮತ್ತು ಪುತ್ರ ಸಿದ್ಧಾರ್ಥ ರೆಡ್ಡಿ (12), ಮಗಳು ಕಾರ್ತಿಕಾ(8) ಮೃತರು.
ರೇಣಿಗುಂಟದ ಪಟ್ಟಣದ ಭಗತ್ ಸಿಂಗ್ ಕಾಲನಿಯಲ್ಲಿ ಡಾ.ರವಿಶಂಕರ ರೆಡ್ಡಿ ಅವರು ಆಸ್ಪತ್ರೆ ನಡೆಸುತ್ತಿದ್ದರು. ವೈದ್ಯ ದಂಪತಿ ಡಾ.ಡಾ.ರವಿಶಂಕರರೆಡ್ಡಿ ಮತ್ತು ಡಾ.ಅನಂತಲಕ್ಷ್ಮೀ ಅವರು ಮಕ್ಕಳೊಂದಿಗೆ ಆಸ್ಪತ್ರೆ ಕಟ್ಟಡದ ಮೇಲಿನ ಮಹಡಿಯಲ್ಲಿ ವೈದ್ಯರ ಕುಟುಂಬ ವಾಸವಿದ್ದರು.
ಭಾನುವಾರ ಬೆಳಗಿನಜಾವ ಶಾರ್ಟ್ ಸರ್ಕ್ಯೂಟ್ನಿಂದ ಕಟ್ಟಟದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಮನೆಯಲ್ಲಿದ್ದ ಮಕ್ಕಳನ್ನು ರಕ್ಷಿಸಲು ಹೋದ ವೈದ್ಯ ಸಜೀವ ದಹನಗೊಂಡಿದ್ದಾರೆ. ಮಕ್ಕಳಿಗೆ ಸುಟ್ಟ ಗಾಯವಾಗಿಲ್ಲವಾದರೂ ಕಾರ್ಬನ್ ಮಾನಾಕ್ಸೈಡ್ ಪರಿಣಾಮ ಮಕ್ಕಳೂ ದುರಂತ ಅಂತ್ಯ ಕಂಡಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದು, ರವಿಶಂಕರ್ ರೆಡ್ಡಿ ಅವರ ತಾಯಿ ಮತ್ತು ಪತ್ನಿಯನ್ನು ರಕ್ಷಿಸಿದ್ದಾರೆ. ಬೆಂಕಿ ಅವಘಡದಲ್ಲಿ ಗಾಯಗೊಂಡ ಅತ್ತೆ-ಸೊಸೆ ಇಬ್ಬರನ್ನೂ ತಿರುಪತಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.