ಕೊಝಿಕ್ಕೋಡ್: ಕೇರಳದ ಕೊಝಿಕ್ಕೋಡ್ ಜಿಲ್ಲೆಯ ಮಾಲ್(Mall) ಒಂದರಲ್ಲಿ ಆಯೋಜಿಸಲಾಗಿದ್ದ ಚಿತ್ರವೊಂದರ ಪ್ರಮೋಷನ್ ಕಾರ್ಯಕ್ರಮದಲ್ಲಿ ತಾನು ಲೈಂಗಿಕ ಕಿರುಕುಳಕ್ಕೊಳಗಾಗಿದ್ದೆ ಎಂಬ ಆಘಾತಕರ ಮಾಹಿತಿಯನ್ನು ಜನಪ್ರಿಯ ಮಲಯಾಳಂ(Malayalam) ನಟಿಯೊಬ್ಬರು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಬಹಿರಂಗಪಡಿಸಿದ್ದಾರೆ.
ಅದೇ ಮಾಲ್‍ನಲ್ಲಿ ಮಂಗಳವಾರ ತಡ ರಾತ್ರಿ ನಡೆದ ಕಾರ್ಯಕ್ರಮದಲ್ಲಿ ಇನ್ನೊಬ್ಬ ನಟಿ ಕೂಡ ಇಂತಹುದೇ ಕಿರುಕುಳ ಎದುರಿಸಿದ್ದಾರೆ ಎಂದು ಆಕೆ ಹೇಳಿಕೊಂಡಿದ್ದಾರೆ.
ಘಟನೆಯದ್ದೆಂದು ಹೇಳಲಾದ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲು ವೈರಲ್ ಆಗಿದ್ದು ಕೆಲ ಸ್ಥಳೀಯ ಟಿವಿ ಚಾನೆಲ್‍ಗಳೂ ಈ ವೀಡಿಯೋಗಳನ್ನು ಪ್ರಸಾರ ಮಾಡಿವೆ.
"ಕೊಝಿಕ್ಕೋಡ್ ನನ್ನ ಇಷ್ಟದ ಸ್ಥಳ. ಆದರೆ ರಾತ್ರಿ ಕಾರ್ಯಕ್ರಮದಿಂದ ವಾಪಸಾಗುತ್ತಿದ್ದಾಗ ಜನಜಂಗುಳಿಯಲ್ಲಿದ್ದ ವ್ಯಕ್ತಿಯೊಬ್ಬ ನನ್ನ ಮೈಮುಟ್ಟಿದ. ಎಲ್ಲಿ ಎಂದು ಹೇಳಲು ಮುಜುಗರವಾಗುತ್ತಿದೆ. ನಮ್ಮ ಸುತ್ತ ಇರುವ ಜನರು ಇಷ್ಟೊಂದು ಹತಾಶರಾಗಿದ್ದಾರೆಯೇ? ಪ್ರಮೋಷನ್ ಅಂಗವಾಗಿ ನಾವು ಹಲವು ಕಡೆಗಳಿಗೆ ಭೇಟಿ ನೀಡಿದ್ದೇವೆ, ಆದರೆ ಈ ರೀತಿಯ ಅನುಭವ ಎಲ್ಲಿಯೂ ಆಗಿಲ್ಲ, ನನ್ನ ಸಹೋದ್ಯೋಗಿಗೂ ಇಂತಹುದೇ ಅನುಭವವಾಗಿತ್ತು, ಆಕೆ ಪ್ರತಿಕ್ರಿಯಿಸಿದ್ದಳು ಆದರೆ ನನಗೆ ಸಾಧ್ಯವಾಗಲಿಲ್ಲ,'' ಎಂದು ನಟಿ ತಡರಾತ್ರಿ ಪೋಸ್ಟ್ ನಲ್ಲಿ ಬರೆದಿದ್ದಾರೆ.
ಇನ್ನೊಬ್ಬ ನಟಿ ಕೂಡ ತಮ್ಮ ಇನ್‍ಸ್ಟಾಗ್ರಾಮ್ ಪುಟದಲ್ಲಿ ತಮ್ಮ ಅನುಭವ ಹೇಳಿಕೊಂಡಿದ್ದಾರೆ. ಮಾಲ್‍ನಲ್ಲಿ ಭಾರೀ ಜನಜಂಗುಳಿಯಿತ್ತು ಹಾಗೂ ಜನರನ್ನು ನಿಯಂತ್ರಿಸಲು ಭದ್ರತಾ ಸಿಬ್ಬಂದಿ ಹರಸಾಹಸ ಪಡುತ್ತಿದ್ದರು. ನನ್ನ ಸಹ-ನಟಿಯೊಬ್ಬರ ಜೊತೆ ಒಬ್ಬ ವ್ಯಕ್ತಿ ತಪ್ಪಾಗಿ ನಡೆದುಕೊಂಡ ಆದರೆ ಆಕೆಗೆ ಪ್ರತಿಕ್ರಿಯಿಸಲು ಸಾಧ್ಯವಾಗಿರಲಿಲ್ಲ, ನಂತರ ನಾನೂ ಅಂತಹುದೇ ಕಿರುಕುಳ ಎದುರಿಸಿದೆ ಆದರೆ ನಾನು ಪ್ರತಿಕ್ರಿಯಿಸಿದೆ, ಯಾರು ಕೂಡ ಈ ರೀತಿಯ ಕಿರುಕುಳ ಎದುರಿಸಬಾರದು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು, ಎಂದು ಆಕೆ ಬರೆದಿದ್ದಾರೆ.
ತನಿಖೆ ನಡೆಯುತ್ತಿದೆ, ಆರೋಪಿಗಳನ್ನು ಪತ್ತೆ ಹಚ್ಚುವ ಯತ್ನ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ ಎಂದು ವರದಿಯಾಗಿದೆ.