ನವದೆಹಲಿ: ಸೌರಶಕ್ತಿಯಿಂದ ಚಾಲಿತವಾಗಿರುವ ಇಲೆಕ್ಟ್ರಿಕ್ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೆಂದ್ರ ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಈ ಕುರಿತು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮಾಹಿತಿ ನೀಡಿದ್ದಾರೆ.
'ಹೆದ್ದಾರಿಯಲ್ಲಿ ಓಡಾಡುವ ಇಲೆಕ್ಟ್ರಿಕ್ ವಾಹನಗಳಿಗೆ ಸೌರಶಕ್ತಿಯಿಂದ ರೀಚಾರ್ಜ್ ಮಾಡಲು ಅವಕಾಶ ಕಲ್ಪಿಸುವ ಯೋಜನೆ ಇದಾಗಿದೆ. ಇದು ಭಾರಿ ಸಾಮರ್ಥ್ಯದ ಟ್ರಕ್‌ಗಳು ಮತ್ತು ಬಸ್‌ಗಳ ಚಾರ್ಜ್‌ಗೆ ಅನುಕೂಲವಾಗಲಿದೆ' ಎಂದು ಅವರು ಹೇಳಿದ್ದಾರೆ.
'ಇಲೆಕ್ಟ್ರಿಕ್ ಹೆದ್ದಾರಿಗಳ ಮೇಲೆ ವಾಹನ ಸಂಚರಿಸಿದರೆ ಸಾಕು, ವಾಹನಗಳು ಚಾರ್ಜ್ ಆಗಬಲ್ಲ ಸೌಲಭ್ಯವನ್ನು ಹೊಂದಿರಲಿವೆ. ಇಲೆಕ್ಟ್ರಿಕ್ ಹೈವೇಗಳ ಜತೆ ಟೋಲ್ ಪ್ಲಾಜಾಗಳಿಗೂ ಸೋಲಾರ್ ಶಕ್ತಿ ಬಳಸಲು ಉತ್ತೇಜನ ನೀಡುವ ಕುರಿತು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ' ಎಂದು ಗಡ್ಕರಿ ಹೇಳಿದ್ದಾರೆ.
'ಪ್ರಧಾನಿ ಮೋದಿ ಅವರು ಚಾಲನೆ ನೀಡಿದ ಗತಿ ಶಕ್ತಿ ಯೋಜನೆಯಿಂದ ದೇಶದಲ್ಲಿ ಹೆದ್ದಾರಿಗಳ ಸುವರ್ಣಯುಗವೇ ಆರಂಭವಾಗಲಿದೆ' ಎಂದು ಸಚಿವ ನಿತಿನ್ ಗಡ್ಕರಿ ವ್ಯಾಖ್ಯಾನಿಸಿದ್ದಾರೆ. 'ವಿದ್ಯುತ್ ಚಲನಶೀಲತೆಗಾಗಿ ಸೌರ ಮತ್ತು ಪವನ ಶಕ್ತಿ ಆಧಾರಿತ ಚಾರ್ಜಿಂಗ್ ಕಾರ್ಯವಿಧಾನಗಳನ್ನು ಕೇಂದ್ರ ಸರ್ಕಾರವು ಬಲವಾಗಿ ಪ್ರೋತ್ಸಾಹಿಸುತ್ತಿದೆ. ನಾವು ಸೌರಶಕ್ತಿಯಿಂದ ಚಾಲಿತವಾಗಿರುವ ಇಲೆಕ್ಟ್ರಿಕ್ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸಲು ಸಹ ಕೆಲಸ ಮಾಡುತ್ತಿದ್ದೇವೆ. ಉತ್ತಮವಾಗಿ ಅಭಿವೃದ್ಧಿ ಹೊಂದಿದ ಮೂಲಸೌಕರ್ಯವು ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸುವ ಜತೆಗೆ, ಹೊಸ ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸುತ್ತದೆ ಎಂದ ಗಡ್ಕರಿ, 'ನಾವು 26 ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇಗಳನ್ನು ನಿರ್ಮಿಸುತ್ತಿದ್ದೇವೆ' ಎಂದು ಹೇಳಿದರು.