HEALTH TIPS

ಸರ್ಕಾರದ ವಿರುದ್ಧ ಸಮರ ಸಾರಲು ಸಂಚು: ಎನ್‌ಐಎ ತನಿಖೆಯಿಂದ ಮಾಹಿತಿ ಬಹಿರಂಗ

 

              ನವದೆಹಲಿ: 'ನಿಷೇಧಿತ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಸಂಘಟನೆಯು ದೇಶ ವಿರೋಧಿ ಚಟುವಟಿಕೆಗಳಿಗಾಗಿ ಸಾಮಾಜಿಕ ಜಾಲತಾಣಗಳ ಮೂಲಕ ಯುವಕರನ್ನು ನೇಮಿಸಿಕೊಳ್ಳುತ್ತಿತ್ತು. ಪಿಎಫ್‌ಐನ ಗುಂಪೊಂದು ತಮಿಳುನಾಡಿನ ವಟ್ಟಕ್ಕನಾಳ್‌ಗೆ ಭೇಟಿ ನೀಡುವ ವಿದೇಶಿಯರು ಅದರಲ್ಲೂ ಮುಖ್ಯವಾಗಿ ಯಹೂದಿಗಳ ಮೇಲೆ ದಾಳಿ ನಡೆಸಲು ಸಿದ್ಧತೆ ನಡೆಸಿತ್ತು' ಎಂದು ರಾಷ್ಟ್ರೀಯ ತನಿಖಾ ಸಂಸ್ಥೆಯ (‌ಎನ್‌ಐಎ) ಅಧಿಕಾರಿಯೊಬ್ಬರು ಗುರುವಾರ ಹೇಳಿದ್ದಾರೆ.

                '15 ಯುವಕರನ್ನು ಒಳಗೊಂಡ ಗುಂಪೊಂದು ದಕ್ಷಿಣ ರಾಜ್ಯಗಳಲ್ಲಿನ ತಮ್ಮ ಸಹವರ್ತಿಗಳು ಅಥವಾ ಐಸಿಸ್‌ ಸಂಘಟನೆ ಜೊತೆ ನಂಟು ಹೊಂದಿದ್ದವರ ಜೊತೆ ಸೇರಿ ಹೈಕೋರ್ಟ್‌ ನ್ಯಾಯಮೂರ್ತಿಗಳು, ಹಿರಿಯ ಪೊಲೀಸ್‌ ಅಧಿಕಾರಿಗಳು ಹಾಗೂ ಅಹಮದಿಯಾ ಗುಂಪಿಗೆ ಸೇರಿದ ಮುಸ್ಲಿಮರ ಮೇಲೆ ದಾಳಿ ನಡೆಸಲು ಪಿತೂರಿ ನಡೆಸಿತ್ತು. ಆ ಮೂಲಕ ದೇಶದಲ್ಲಿ ಭಯೋತ್ಪಾದಕ ವಾತಾವರಣ ಸೃಷ್ಟಿಸಲು ಸಂಚು ರೂಪಿಸಿತ್ತು ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ' ಎಂದಿದ್ದಾರೆ.

                'ಸ್ಫೋಟಕ ಹಾಗೂ ವಿದ್ವಂಸಕ ಕೃತ್ಯಕ್ಕೆ ಬಳಸಲಾಗುವ ಇತರೆ ವಸ್ತುಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದ ಈ ಗುಂಪು, ಗಣ್ಯರನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸಲು ಸಿದ್ಧತೆ ಕೈಗೊಂಡಿತ್ತು. ಆ ಮೂಲಕ ಸರ್ಕಾರದ ವಿರುದ್ಧ ಸಮರ ಸಾರಲು ಮುಂದಾಗಿತ್ತು' ಎಂದು ಹೇಳಿದ್ದಾರೆ.

                 'ಅನ್ಸರ್‌-ಉಲ್‌-ಖಿಲಾಫಾ ಕೇರಳ' ಹೆಸರಿನ ಗುಂಪು ಐಸಿಸ್‌ ಮತ್ತು ಐಎಸ್‌ಐಎಲ್‌ಗೆ ಸೇರುವಂತೆ ಮುಸ್ಲಿಂ ಸಮುದಾಯದ ಯುವಕರನ್ನು ಪ್ರೇರೇಪಿಸುತ್ತಿತ್ತು. ಈ ಗುಂಪಿನ ಸದಸ್ಯರು ಇಂಟರ್‌ನೆಟ್‌ ಮಾಧ್ಯಮದ ಮೂಲಕ ರಹಸ್ಯವಾಗಿ ಐಸಿಸ್‌ ಸಿದ್ಧಾಂತವನ್ನು ಪ್ರಚಾರ ಮಾಡುತ್ತಿದ್ದರು. ಉಗ್ರರ ಚಲನವಲನಗಳ ಮೇಲೆ ನಿರಂತರ ನಿಗಾ ಇಟ್ಟಿದ್ದ ಅಧಿಕಾರಿಗಳ ತಂಡವು 2016ರ ಅಕ್ಟೋಬರ್ 2ರಂದು ಮನ್ಸೀದ್‌, ಸ್ವಲಿತ್‌ ಮಹಮ್ಮದ್‌, ರಶೀದ್‌ ಅಲಿ ಸಫಾವನ್‌ ಮತ್ತು ಎನ್‌.ಕೆ.ಜಸೀಂ ಎಂಬುವರನ್ನು ಕೇರಳದ ಕಣ್ಣೂರಿನಲ್ಲಿ ಬಂಧಿಸಿತ್ತು. ಇವರು ಸರ್ಕಾರದ ವಿರುದ್ಧ ಸಮರ ಸಾರಲು ಪೂರ್ವಭಾವಿ ಸಭೆಗಳನ್ನು ನಡೆಸಿದ್ದರು. ಆರೋಪಿಗಳ ಮನೆಗಳಲ್ಲಿ ಶೋಧ ನಡೆಸಿ ಡಿಜಿಟಲ್‌ ಉಪಕರಣ ಹಾಗೂ ಇನ್ನಿತರ ದಾಖಲೆಗಳನ್ನು ಜಪ್ತಿ ಮಾಡಲಾಗಿತ್ತು' ಎಂದು ವಿವರಿಸಿದ್ದಾರೆ.

              'ಆರೋಪಿಗಳು ಫೇಸ್‌ಬುಕ್‌, ಟೆಲಿಗ್ರಾಮ್‌ ಹಾಗೂ ಇತರ ಸಾಮಾಜಿಕ ಮಾಧ್ಯಮಗಳ ಮೂಲಕ ವಿದೇಶದಲ್ಲಿರುವ ಉಗ್ರ ಸಂಘಟನೆಯ ಸದಸ್ಯರೊಂದಿಗೆ ಸಂವಹನ ನಡೆಸುತ್ತಿದ್ದರು. ಟೆಲಿಗ್ರಾಮ್‌ನಲ್ಲಿ 'ದಿ ಗೇಟ್‌', 'ಬಾಬ್‌ ಅಲ್‌ ನೂರ್‌', 'ಪ್ಲೇ ಗ್ರೌಂಡ್‌' ಹೀಗೆ ವಿವಿಧ ಹೆಸರಿನಡಿ ಗುಂಪುಗಳನ್ನು ಸೃಷ್ಟಿಸಿಕೊಂಡು, ಅವುಗಳ ಮೂಲಕ ದೇಶ ವಿರೋಧಿ ಚಟುವಟಿಕೆಗಳಿಗಾಗಿ ಯುವಕರನ್ನು ನೇಮಿಸಿಕೊಳ್ಳುತ್ತಿದ್ದರು ಎಂಬುದೂ ವಿಚಾರಣೆಯಿಂದ ಗೊತ್ತಾಗಿದೆ' ಎಂದಿದ್ದಾರೆ.

                                 'ನಿರ್ದಿಷ್ಟ ವ್ಯಕ್ತಿಗಳ ಹತ್ಯೆಗೆ ಸಂಚು ರೂಪಿಸಿದ್ದ ಪಿಎಫ್‌ಐ'
         ಮುಂಬೈ
: 'ದ್ವೇಷಪೂರಿತ ಅಪರಾಧಗಳನ್ನು ನಡೆಸಲು ಹಾಗೂ ನಿರ್ದಿಷ್ಟ ವ್ಯಕ್ತಿಗಳ ಹತ್ಯೆಗಾಗಿ ತನ್ನ ಸದಸ್ಯರನ್ನು ಪ್ರೇರೇಪಿಸುವ ಸಲುವಾಗಿ ಪಿಎಫ್‌ಐ ಯೋಜನೆಯೊಂದನ್ನು ರೂಪಿಸಿತ್ತು' ಎಂದು ಮಹಾರಾಷ್ಟ್ರ ಎಟಿಎಸ್‌ನ ಮುಖ್ಯಸ್ಥ ವಿನೀತ್‌ ಅಗರವಾಲ್ ಗುರುವಾರ ಹೇಳಿದ್ದಾರೆ.

              'ಪಿಎಫ್‌ಐ ಜೊತೆ ನಂಟು ಹೊಂದಿರುವ ವ್ಯಕ್ತಿಗಳನ್ನು ಇತ್ತೀಚೆಗೆ ಬಂಧಿಸಿ ಕೆಲ ದಾಖಲೆಗಳನ್ನು ಜಪ್ತಿ ಮಾಡಲಾಗಿತ್ತು. 2047ರವರೆಗೆ ತಾನು ನಡೆಸಬೇಕಿರುವ ದಾಳಿಗಳ ಕುರಿತ ನೀಲನಕಾಶೆಯೊಂದನ್ನು ಪಿಎಫ್‌ಐ ಸಿದ್ಧಪಡಿಸಿಕೊಂಡಿತ್ತು. ಅದು ನಮಗೆ ದೊರೆತಿದೆ. ಇದೇ 28ರಂದು ನಡೆಸಿದ್ದ ದಾಳಿ ವೇಳೆ ಕೆಲ 'ಗ್ಯಾಜೆಟ್‌'ಗಳೂ ಲಭಿಸಿವೆ. ಅವುಗಳಲ್ಲಿನ ದತ್ತಾಂಶ ಸಂಗ್ರಹಿಸುವ ಕೆಲಸ ನಡೆಯುತ್ತಿದೆ' ಎಂದು ತಿಳಿಸಿದ್ದಾರೆ.

              'ಪಿಎಫ್‌ಐ ಸಂಘಟನೆ ಸದಸ್ಯರ ಬ್ಯಾಂಕ್‌ ಖಾತೆಗಳನ್ನು ಪರಿಶೀಲಿಸಲಾಗುತ್ತಿದೆ. ಅವುಗಳನ್ನು ಶೀಘ್ರವೇ ಜಪ್ತಿ ಮಾಡಲಾಗುತ್ತದೆ' ಎಂದಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries