ಚೆನ್ನೈ: ಕುಂಬಕೋಣಂ ದೇವಸ್ಥಾನವೊಂದರಿಂದ ಕಳುವಾಗಿದ್ದ ಕಾಳಿಂಗಮರ್ದನ ಕೃಷ್ಣ, ವಿಷ್ಣು ಹಾಗೂ ಶ್ರೀದೇವಿ ಕಂಚಿನ ಪುರಾತನ ಮೂರ್ತಿಗಳು ಅಮೆರಿಕದ ಮ್ಯೂಸಿಯಂ ಹಾಗೂ ಹರಾಜು ಮಳಿಗೆಯೊಂದರಲ್ಲಿ ದೊರೆತಿದೆ ಎಂದು ಅಪರಾಧ ತನಿಖಾ ಇಲಾಖೆಯ ವಿಗ್ರಹ ಕಳವು ಪತ್ತೆ ವಿಭಾಗದ ಅಧಿಕಾರಿಗಳು ಗುರುವಾರ ಹೇಳಿದ್ದಾರೆ.
ಕುಂಬಕೋಣಂನ ಅರುಳ್‌ಮಿಗು ಸೌಂದರರಾಜ ಪೆರುಮಾಳ್ ದೇವಸ್ಥಾನದಿಂದ ಕಳವಾಗಿದ್ದ ಕೃಷ್ಣನ ವಿಗ್ರಹವು ಸ್ಯಾನ್ ಫ್ರಾನ್ಸಿಸ್ಕೊ ಏಷಿಯನ್ ಆರ್ಟ್ ಮ್ಯೂಸಿಯಂನಲ್ಲಿ, ವಿಷ್ಣು ವಿಗ್ರಹವು ಟೆಕ್ಸಾಸ್‌ನ ಕಿಂಬೆಲ್ ಆರ್ಟ್ ಮ್ಯೂಸಿಯಂ ಹಾಗೂ ಶ್ರೀದೇವಿ ವಿಗ್ರಹವು ಫ್ಲೋರಿಡಾದ ಹರಾಜು ಮಳಿಗೆಯಲ್ಲಿ ಪತ್ತೆಯಾಗಿವೆ.
2020ರ ಫೆಬ್ರುವರಿಯಲ್ಲಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಕೆ. ರಾಜು ಅವರು, ದೇವಾಲಯದ ತಿರುಮಂಗೈ ಅಲ್ವಾರ್ ವಿಗ್ರಹವನ್ನು ಕಳವು ಮಾಡಲಾಗಿದೆ ಎಂದು ದೂರು ನೀಡಿದ್ದರು. ದೂರಿನ ತನಿಖೆ ವೇಳೆ, ಸುಮಾರು 60-65 ವರ್ಷಗಳ ಹಿಂದೆಯೇ ವಿಗ್ರಹವನ್ನು ಕಳವು ಮಾಡಲಾಗಿದೆ. ವಿಗ್ರಹದ ಜಾಗದಲ್ಲಿ ಅದರಂತೆಯೇ ಹೋಲುವ ನಕಲಿ ವಿಗ್ರಹವೊಂದನ್ನು ಇಡಲಾಗಿದೆ ಎಂದು ತಿಳಿದುಬಂದಿತ್ತು.
ನಂತರದಲ್ಲಿ ತಿರುಮಂಗೈ ಅಲ್ವಾರ್ ವಿಗ್ರಹವು ಲಂಡನ್‌ನ ಅಸ್ಮೊಲಿಯನ್ ಮ್ಯೂಸಿಯಂನಲ್ಲಿ ಪತ್ತೆಯಾಗಿತ್ತು. ಇದಾದ ಬಳಿಕ ಸಿಐಡಿ ಅಧಿಕಾರಿಗಳು ತನಿಖೆಯನ್ನೂ ಇದೇ ಹಾದಿಯಲ್ಲಿ ನಡೆಸಿದರು. ಈಗ ಮೂರೂ ವಿಗ್ರಹಗಳು ಅಮೆರಿಕದಲ್ಲಿ ಪತ್ತೆಯಾಗಿವೆ.