ನವದೆಹಲಿ: ಎಐಸಿಸಿ ಅಧ್ಯಕ್ಷೀಯ ಚುನಾವಣೆಯ ಮತದಾರರ ಪಟ್ಟಿಯನ್ನು ಪ್ರಕಟಿಸುವಂತೆ ಹಿರಿಯ ಕಾಂಗ್ರೆಸ್ ನಾಯಕ, ಸಂಸದ ಶಶಿ ತರೂರ್ ಶುಕ್ರವಾರ ಪಕ್ಷದ ಕೇಂದ್ರ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂದನ್ ಮಿಸ್ತ್ರಿ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿರುವ ತರೂರ್ ಅವರು, 'ನಾಮ ನಿರ್ದೇಶನ ಮಾಡುವ ಮತ್ತು ಮತ ಚಲಾಯಿಸುವ ಹಕ್ಕು ಯಾರ್‍ಯಾರಿಗೆ ಇದೆ ಎಂಬುದು ಎಲ್ಲರಿಗೂ ತಿಳಿದಿರಬೇಕು. ಹೀಗಾಗಿ ಅದನ್ನು ಎಐಸಿಸಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು' ಎಂದು ಅವರು ಹೇಳಿದ್ದಾರೆ.
ಅಸ್ಸಾಂನ ಸಂಸದ ಪ್ರದ್ಯುತ್ ಬೋರ್ದೊಲಾಯಿ ಸಹ ಮತದಾರರ ಪಟ್ಟಿಯನ್ನು ಪ್ರಕಟಿಸುವಂತೆ ಮಿಸ್ತ್ರಿ ಅವರಿಗೆ ಪತ್ರ ಬರೆದಿದ್ದಾರೆ.
'ಚುನಾವಣಾ ಪ್ರಕ್ರಿಯೆ ಮುಕ್ತ, ನ್ಯಾಯಸಮ್ಮತವಾಗಿ ನಡೆಯುತ್ತಿದೆ ಎಂಬು ದನ್ನು ಖಾತ್ರಿಪಡಿಸಿಕೊಳ್ಳಲು ಮತದಾರರ ಪಟ್ಟಿಯನ್ನು ಬಹಿರಂಗಗೊಳಿಸಬೇಕು' ಎಂದು ಪಕ್ಷದ ನಾಯಕರಾದ ಮನೀಶ್ ತಿವಾರಿ, ಕಾರ್ತಿ ಚಿದಂಬರಂ ಮತ್ತು ಶಶಿ ತರೂರ್ ಬುಧವಾರವೂ ಆಗ್ರಹಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಮಿಸ್ತ್ರಿ, 'ಚುನಾವಣೆ ಪಾರದರ್ಶಕ, ಮುಕ್ತ ಮತ್ತು ನ್ಯಾಯಸಮ್ಮತವಾಗಿಯೇ ನಡೆಯಲಿದೆ' ಎಂದಿದ್ದಾರೆ. ಕಳೆದ ವಾರ ಹೇಳಿಕೆ ನೀಡಿದ್ದ ಮಿಸ್ತ್ರಿ, 'ಪಕ್ಷದ ಸಂವಿಧಾನದ ಪ್ರಕಾರ, ಮತದಾರರ ಪಟ್ಟಿಯನ್ನು ಸಾರ್ವಜನಿಕವಾಗಿ ಪ್ರಕಟಿಸುವಂತಿಲ್ಲ. ಆದರೆ ಚುನಾವಣೆಯಲ್ಲಿ ಸ್ಪರ್ಧಿಸುವವರಿಗೆ ಈ ಪಟ್ಟಿ ನೀಡಲಾಗುತ್ತದೆ' ಎಂದಿದ್ದರು.