1. ಕೃತಕ ಸಕ್ಕರೆ ಏನಿದು?
ಕಡಿಮೆ ಕ್ಯಾಲೋರಿ ಸ್ವೀಟ್ ಅಥವಾ ಜೀರೋ ಕ್ಯಾಲೊರಿ ಸ್ವೀಟ್ ನರ್ ಹೆಸರಿನಲ್ಲಿ ಇಂದು ಸುಲಭವಾಗಿ ಮಾರುಕಟ್ಟೆಯಲ್ಲಿ ದೊರಕುವ ಈ ಕೃತಕ ಸಕ್ಕರೆಯು ಸಕ್ಕರೆಯ ರುಚಿಯನ್ನೇ ಹೊಂದಿರುತ್ತದೆ ಆದರೆ ಸಕ್ಕರೆಗಿಂತ ಗಣನೀಯ ಪ್ರಮಾಣದಲ್ಲಿ ಕಡಿಮೆ ಎನರ್ಜಿಯನ್ನಷ್ಟೇ ಹೊಂದಿರುತ್ತದೆ. ಹೀಗಾಗಿ ಕೃತಕ ಸಕ್ಕರೆಯಿಂದ ದೇಹಕ್ಕೆ ಹೆಚ್ಚಿನ ಕಾರ್ಬೋಹೈಡ್ರೇಟ್ಸ್ ಸೇರುವುದಿಲ್ಲ. ದಿನಕ್ಕೆ ನಿಖರ ಪ್ರಮಾಣದ ಕ್ಯಾಲೋರಿ ಯನ್ನಷ್ಟೇ ತೆಗೆದುಕೊಳ್ಳಬೇಕೆಂದು, ಕ್ಯಾಲೋರಿ ಲೆಕ್ಕ ಹಾಕಿ ಆಹಾರ ಸೇವನೆ ಮಾಡುವಂತಹ ಸಂದರ್ಭದಲ್ಲಿ, ಈ ಕೃತಕ ಸಕ್ಕರೆಯ ಕೊಡುಗೆ ಹೆಚ್ಚು. ಇದರಿಂದ ಕ್ಯಾಲೋರಿ ದೇಹಕ್ಕೆ ಸೇರುವ ಯೋಚನೆಯೇ ಇಲ್ಲ.
ಎಷ್ಟೋ ಜನಕ್ಕೆ ಕೃತಕ ಸಕ್ಕರೆಯು ಆರೋಗ್ಯಕ್ಕೆ ಒಳ್ಳೆಯದೇ ಎಂಬ ಚಿಂತೆ ಕಾಡುತ್ತದೆ. ಆದರೆ, ಮಾರುಕಟ್ಟೆಯಲ್ಲಿ ದೊರಕುತ್ತಿರುವ ಕೃತಕ ಸಕ್ಕರೆಯ ಬಗ್ಗೆ ಸಾಕಷ್ಟು ಅಧ್ಯಯನಗಳನ್ನು ನಡೆಸಿ, ಕೂಲಂಕುಶವಾಗಿ ಪರಿಶೀಲಿಸಲಾಗಿದೆ. ಸಂಬಂಧಿತ ಅಧಿಕಾರಿಗಳ ಒಪ್ಪುಗೆ ಇಲ್ಲದೆ ಇಂತಹ ಕೃತಕ ಸಕ್ಕರೆಯನ್ನು ಮಾರುವಂತಿಲ್ಲ.
ಕೃತಕ ಸಕ್ಕರೆಯು ತೂಕವನ್ನು ಹೆಚ್ಚಿಸುವುದಿಲ್ಲ.ತೂಕವನ್ನು ಕಡಿಮೆ ಮಾಡುವಲ್ಲಿ ಇದು ಬಹಳ ಸಹಕಾರಿ.
ಆದರೆ ಈ ಕಡಿಮೆ ಕ್ಯಾಲೊರಿ ಸ್ವೀಟ್ ನರ್ ಬಗ್ಗೆ ಇರುವ ಸತ್ಯ ಮತ್ತು ಮಿಥ್ಯ ಗಳನ್ನು ತಿಳಿದುಕೊಂಡು ಆನಂತರ ಇದನ್ನು ಬಳಸುವುದೇ ಸೂಕ್ತ.
2. ಮಿಥ್ಯ : ಎಲ್ಲಾ ಸಕ್ಕರೆ ರಹಿತ ಆಹಾರಗಳು ಒಂದೇ
ಸತ್ಯ : ಎಲ್ಲಾ ಸಕ್ಕರೆ ರಹಿತ ಆಹಾರಗಳು ಒಂದೇ ಅಲ್ಲ.
ಆಸ್ಪರ್ಟೇಮ್, ಸುಕ್ರಲೋಸ್ ಅಥವಾ ಸ್ಟೀವಿಯಾದಂತಹ ವಿವಿಧ ರಾಸಾಯನಿಕಗಳು ಸಕ್ಕರೆ ರಹಿತ ಗುಂಪಿಗೆ ಬರುತ್ತದೆ. ಹೆಚ್ಚಿನ ತಾಪಮಾನದಲ್ಲಿ ಆಸ್ಪರ್ಟೇಮ್ ಅಸ್ಥಿರವಾಗಿರುವುದರಿಂದ, ಅದನ್ನು ಬೇಕಿಂಗ್ ಅಥವಾ ಬಿಸಿ ಪದಾರ್ಥಗಳನ್ನು ಮಾಡುವಾಗ ಬಳಸಬಾರದು. ಬಿಸಿ ಅಲ್ಲದ ಪದಾರ್ಥಗಳನ್ನು ತಯಾರಿಸುವಾಗ, ಇದು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಬೇಕಿಂಗ್, ಬಿಸಿ ಚಹಾಗಳು ಮತ್ತು ಕಾಫಿಗಾಗಿ ಸುಕ್ರಲೋಸ್ ಅನ್ನು
ಬಳಸಬಹುದು, ತಣ್ಣನೆಯ ಪದಾರ್ಥಗಳನ್ನು ತಯಾರಿಸಲೂ ಇದನ್ನು ಬಳಸಬಹುದು ಏಕೆಂದರೆ ಇದು ಹೆಚ್ಚಿನ ತಾಪಮಾನದಲ್ಲಿ ಸ್ಥಿರವಾಗಿರುತ್ತದೆ. ಸ್ಟೀವಿಯಾ ಹೆಚ್ಚಿನ ತಾಪಮಾನದಲ್ಲಿ ಸ್ಥಿರವಾಗಿದ್ದರೂ, ತಿಂದ ನಂತರ
ನಾಲಿಗೆಯ ಮೇಲೆ ಕಹಿಯ ಅಂಶ ಉಳಿಸುವುದರಿಂದ ಹೆಚ್ಚಿನ ಜನಕ್ಕೆ ಇದು ರುಚಿಸುವುದಿಲ್ಲ.
3. ಮಿಥ್ಯ : ಸಕ್ಕರೆ ರಹಿತ ಸ್ವೀಟ್ ಗಳು ಲಿವರ್ ಗೆ ಒಳ್ಳೆಯದಲ್ಲ
ಸತ್ಯಾಂಶ : ಸಕ್ಕರೆ ರಹಿತ ಸ್ವೀಟ್ ಗಳನ್ನು ಹೆಚ್ಚು ಗಾಢ ಸ್ವೀಟ್ ನರ್ ಗಳನ್ನು ಉಪಯೋಗಿಸಿ ತಯಾರಿಸಲಾಗುತ್ತದೆ. ಇವು ವಿಶೇಷ ರೀತಿಯ ಕೆಮಿಕಲ್ಸ್ ಆಗಿದ್ದು, ಮಾಮೂಲಿ ಸಕ್ಕರೆಗಿಂತ 300 ರಿಂದ 500 ಪಟ್ಟು ಹೆಚ್ಚು ಸಕ್ಕರೆ ಅಂಶ ಹೊಂದಿರುತ್ತದೆ.
ಈ ರೀತಿಯ ಕೃತಕ ಸಕ್ಕರೆಯ ಸುರಕ್ಷತೆಯ ಬಗ್ಗೆ ಸಾಕಷ್ಟು ಪ್ರಾಯೋಗಿಕ ಪರೀಕ್ಷೆಗಳು ನಡೆದಿದ್ದು ಆದಷ್ಟು ಕಡಿಮೆ ಪ್ರಮಾಣದಲ್ಲಿ ಇದನ್ನು ಬಳಸುವುದೇ ಸೂಕ್ತವೆಂದು ತಿಳಿದು ಬಂದಿದೆ.
4. ಮಿಥ್ಯ : ಸುಕ್ರಲೋಸ್ ಅಂತಹ ಕೃತಕ ಸಕ್ಕರೆ ಗಿಂತ ನೈಸರ್ಗಿಕ ಸಕ್ಕರೆಯಾದ ಸ್ಟೀವಿಯಾ ಉತ್ತಮ
ಸತ್ಶ : ಎರಡೂ ಬಗೆಯ ಸ್ವೀಟ್ ನರ್ಗಳು ದೊಡ್ಡವರಿಗೆ ಸುರಕ್ಷಿತವೇ. ಆದರೆ, ಮಕ್ಕಳಿಗೆ ಬಳಸುವುದಾದರೆ ಸ್ಟೀವಿಯ ಉತ್ತಮ. ಅಡ್ಡ ಪರಿಣಾಮಗಳು ಉಂಟಾಗಬಾರದೆಂಬ ದೃಷ್ಟಿಯಿಂದ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ನುರಿತ ತಜ್ಞರೊಂದಿಗೆ ಚರ್ಚಿಸುವುದು ಸೂಕ್ತ.
5. ಮಿಥ್ಯ : ಸಕ್ಕರೆ ಮುಕ್ತ ಸ್ವೀಟ್ಗಳಲ್ಲಿ ಕ್ಯಾಲೋರಿಗಳು ಸಂಪೂರ್ಣವಾಗಿ ಇರುವುದೇ ಇಲ್ಲ
ಸತ್ಯ : ಸಾಮಾನ್ಯವಾಗಿ ಸಿಹಿತಿನುಸುಗಳ ಸಿದ್ಧತೆಯಲ್ಲಿ ಖೋವಾ, ಹಾಲಿನ ಪುಡಿ ,ತುಪ್ಪ ,ಎಣ್ಣೆ ಮುಂತಾದ ಹೆಚ್ಚು ಕ್ಯಾಲೊರಿ ಇರುವಂತಹ ಪದಾರ್ಥಗಳನ್ನು ಮುಖ್ಯವಾಗಿ ಸೇರಿಸಿರುತ್ತಾರೆ. ಕೃತಕ ಸಕ್ಕರೆಯಿಂದೇನೋ ಕ್ಯಾಲೋರಿಯನ್ನು ನಿರ್ಲಕ್ಷಿಸಬಹುದು. ಆದರೆ ಈ ಪದಾರ್ಥಗಳಿಂದ ದೇಹಕ್ಕೆ ಸೇರಬಹುದಾದ ಹೆಚ್ಚು ಕ್ಯಾಲೋರಿ ಅಂತೂ ಬದಲಾಗುವುದಿಲ್ಲ. ಆದುದರಿಂದ ಯಾವುದೇ ಪದಾರ್ಥವನ್ನು ಖರೀದಿಸುವ ಮುನ್ನ ಜಾಗೃತರಾಗಿ ಅದರ ಲೇಬಲ್ ಕಡೆ ನಿಗವಹಿಸುವುದು ಅತ್ಯವಶ್ಯಕ.
6. ಮಿಥ್ಯ : ಸಕ್ಕರೆ ರಹಿತ ಸ್ವೀಟ್ ಗಳು ರಕ್ತದಲ್ಲಿನ ಸಕ್ಕರೆಯನ್ನು ಹೆಚ್ಚಿಸುವುದಿಲ್ಲ
ಸ್ತವ: ಇದೊಂದು ತಪ್ಪು ಕಲ್ಪನೆ. ಪ್ರತಿಯೊಂದು ಆಹಾರ ಪದಾರ್ಥವೂ ಗ್ಲಿಸಮಿಕ್ ಲೋಡ್ ಹೊಂದಿರುತ್ತದೆ. ಕೆಲವು ಪದಾರ್ಥಗಳಲ್ಲಿ ಹೆಚ್ಚು ಗ್ಲಿಝಮಿಕ್ ಇಂಡೆಕ್ಸ್(GI) ವ್ಯಾಲ್ಯೂ ಇರುತ್ತದೆ. ಇದು ಖಂಡಿತ ಬ್ಲಡ್ ಶುಗರ್ ಮಟ್ಟವನ್ನು ಹೆಚ್ಚಿಸುತ್ತದೆ. ಇಲ್ಲಿ ಸಕ್ಕರೆ ರಹಿತ ಸ್ವೀಟ್ ನರ್ ಗಳಿಂದ ತಯಾರಿಸಲ್ಪಟ್ಟಿದೆ ಎಂಬುದಕ್ಕೆ ಸಂಬಂಧವೂ ಇಲ್ಲ ಅರ್ಥವೂ ಇಲ್ಲ. ಸಾಮಾನ್ಯವಾಗಿ, ಯಾವುದೇ ಸಿಹಿ ಪದಾರ್ಥವನ್ನು ತಯಾರಿಸಲು 20 ರಿಂದ 25% ಕೃತಕ ಸಕ್ಕರೆಯ ಭಾಗ ಬಳಸಿರಬಹುದು. ಆದರೆ, ಮಿಕ್ಕ ಬಹುತೇಕ ಪಾಲಿನ ಪದಾರ್ಥಗಳು ಬ್ಲಡ್ ಶುಗರ್ ಮಟ್ಟವನ್ನು ಏರಿಸುವ ಸಾಧ್ಯತೆಗಳಿರುತ್ತದೆ.
ಹೀಗಾಗಿ, ಗ್ರಾಹಕರು ಎಚ್ಚೆತ್ತುಕೊಳ್ಳಬೇಕು. ಯಾವುದೇ ಪದಾರ್ಥವನ್ನು ಖರೀದಿಸುವ ಮುನ್ನ ಅದರ ಲೇಬಲ್ ಓದುವುದು ಬಹಳ ಮುಖ್ಯ.