ತಿರುವನಂತಪುರ: ಕಾಂಗ್ರೆಸ್ ಪಕ್ಷದ ಭಾರತ್ ಜೋಡೊ ಯಾತ್ರೆ (ಭಾರತ ಒಗ್ಗೂಡಿಸಿ ಯಾತ್ರೆ) ಕೇರಳಕ್ಕೆ ಪ್ರವೇಶಿಸಿದೆ.
ಕೇರಳದ ಪಾರಾಶಾಲಾದಿಂದ ಭಾನುವಾರ ಬೆಳಿಗ್ಗೆ ಯಾತ್ರೆ ಆರಂಭಗೊಂಡಿತು. ಈ ವೇಳೆ ಕಾರ್ಯಕರ್ತರು ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪರ ಘೋಷಣೆ ಕೂಗಿದರು.
ರಾಹುಲ್ ಗಾಂಧಿ ಅವರು 19 ದಿನಗಳ ಕೇರಳ ಯಾತ್ರೆಯಲ್ಲಿ ಮಲಪ್ಪುರದ ನಿಲಂಬೂರ್ ವರೆಗೆ 450 ಕಿ.ಮೀ. ದೂರ ಪಾದಯಾತ್ರೆ ನಡೆಸಲಿದ್ದಾರೆ.
ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಕೆ. ಸುಧಾಕರನ್, ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ತಾರಿಕ್ ಅನ್ವರ್ ಹಾಗೂ ಇತರೆ ನಾಯಕರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಸ್ವಾಗತಿಸಿದರು.
ಕಾಂಗ್ರೆಸ್ ಮುಖಂಡರಾದ ಕೆ.ಸಿ. ವೇಣುಗೋಪಾಲ್, ಶಶಿ ತರೂರ್, ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಮತ್ತು ರಮೇಶ್ ಚೆನ್ನಿತ್ತಲ ಉಪಸ್ಥಿತರಿದ್ದರು.
12 ರಾಜ್ಯ ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ 150 ದಿನಗಳ ಭಾರತ್ ಜೋಡೊ ಯಾತ್ರೆಯು ತಮಿಳುನಾಡಿನ ಕನ್ಯಾಕುಮಾರಿಯಿಂದ ಜಮ್ಮು ಮತ್ತು ಕಾಶ್ಮೀರದವರೆಗೆ ಒಟ್ಟು 3,750 ಕಿ.ಮೀ. ದೂರ ಕ್ರಮಿಸಲಿದೆ.
eet
Conversation