ಮಳೆಗಾಲದಲ್ಲಿ ಅಲ್ಲಲ್ಲಿ ವಿದ್ಯುತ್ ಅವಘಡಗಳಾಗುವುದನ್ನು ಕೇಳಿರಬಹುದು. ಇದಕ್ಕೆ ಒಂದು ಕಾರಣ, ಪ್ರಕೃತಿಯ ವೈಪರಿತ್ಯ ಆದ್ರೆ, ಮತ್ತೊಂದು ಕಾರಣ, ನಮ್ಮ ಮನೆಯ ಉಪಕರಣಗಳೇ ಆಗಿರುತ್ತದೆ. ವೈರಿಂಗ್ ಅಥವಾ ಉಪಕರಣದ ವೈಫಲ್ಯದಲ್ಲಿನ ದೋಷಗಳಿಂದಾಗಿ ಬೆಂಕಿ ಸಂಭವಿಸುತ್ತವೆ. ಇದರ ಜೊತೆಗೆ ನಾವು ನಿರ್ಲಕ್ಷ್ಯ ಮಾಡುವ ಸಣ್ಣ ತಪ್ಪು ಸಹ ವಿದ್ಯುತ್ ಅಪಘಾತಕ್ಕೆ ಕಾರಣವಾಗುತ್ತದೆ. ಹಾಗಾದ್ರೆ, ಮನೆಯಲ್ಲಿ ವಿದ್ಯುತ್ ಅವಘಡ ಸಂಭವಿಸಲು ಸಾಮಾನ್ಯ ಕಾರಣಗಳು ಏನು ಎಂಬುದನ್ನು ಇಲ್ಲಿ ನೋಡೋಣ.
ಮನೆಯಲ್ಲಿ ವಿದ್ಯುತ್ ಅವಘಡ ಸಂಭವಿಸಲು ಸಾಮಾನ್ಯ ಕಾರಣಗಳೇನು ಎಂಬುದನ್ನು ಈ ಕೆಳಗೆ ನೀಡಲಾಗಿದೆ:
1. ದೋಷವಿರುವ ಮತ್ತು ಹಳೆಯ ಉಪಕರಣಗಳು
ನಿಮ್ಮ ಮನೆಯ ವಿದ್ಯುತ್ ತಂತಿಗಳು, ರೆಸೆಪ್ಟಾಕಲ್‌ಗಳು ಮತ್ತು ಸ್ವಿಚ್‌ಗಳಲ್ಲಿ ಏನಾದರೂ ಸಮಸ್ಯೆಯಿದ್ದರೆ ಅಥವಾ ಈ ಎಲ್ಲಾ ಉಪಕರಣಗಳು ಹಳೆಯದಾಗಿದ್ದರೆ, ಅದರಿಂದ ಅವಘಢ ಅಥವಾ ಅಪಾಯ ತಪ್ಪಿದ್ದಲ್ಲ. ಯಾವುದಾದ್ರೂ ಉಪಕರಣ ಸವೆದಿದ್ದರೆ, ಅದು ಅಪಾಯಕಾರಿ ಮಟ್ಟದ ಶಾಖವನ್ನು ಉಂಟುಮಾಡಿ, ರಗ್ಗುಗಳು ಮತ್ತು ಪರದೆಗಳಿಗೆ ಬೆಂಕಿ ಹೊತ್ತುಕೊಳ್ಳುವಂತೆ ಮಾಡಬಹುದು. ಆದ್ದರಿಂದ ಇಂತಹ ಉಪಕರಣಗಳಿದ್ದರೆ, ತಕ್ಷಣವೇ ಬದಲಾಯಿಸಿ.
2. ಎಕ್ಸ್‌ಟೆನ್ಷನ್ ಕಾರ್ಡ್‌ನ ದುರ್ಬಳಕೆ:
ಹೌದು, ಎಕ್ಸ್‌ಟೆನ್ಷನ್ ಕಾರ್ಡ್‌ನ ದುರ್ಬಳಕೆಯು ಸಹ ವಿದ್ಯುತ್ ಅಪಘಾತ ಸಂಭವಿಸಲು ಕಾರಣವಾಗಬಹುದು. ದೊಡ್ಡ ಉಪಕರಣಗಳನ್ನು ಎಕ್ಸ್‌ಟೆನ್ಷನ್ ಬೋರ್ಡ್‌ಗೆ ಪ್ಲಗ್ ಮಾಡಬಾರದು. ಒಂದು ವೇಳೆ ಆ ಉಪಕರಣಕ್ಕೆ ಹತ್ತಿರ ಪ್ಲಗ್ ಸ್ಲಾಟ್ ಇಲ್ಲದಿದ್ದರೆ, ಅದಕ್ಕಾಗಿ ಒಂದು ಸ್ಲಾಟ್ ಸ್ಥಾಪಿಸಬೇಕೇ ಹೊರತು, ಎಕ್ಸ್‌ಟೆನ್ಷನ್ ಕಾರ್ಡ್ ಬಳಕೆ ಮಾಡಬಾರದು.
3.ಸ್ಪೇಸ್ ಹೀಟರ್‌ಗಳು
ವಿದ್ಯುತ್ ಹೀಟರ್ ಅನ್ನು ಪರದೆಗಳು, ಹಾಸಿಗೆಗಳು ಮತ್ತು ಪೀಠೋಪಕರಣಗಳಿಗೆ ತುಂಬಾ ಹತ್ತಿರದಲ್ಲಿ ಇಡುವುದು ಸಹ ಮನೆಯಲ್ಲಿ ವಿದ್ಯುತ್ ಅವಘಢ ಸಂಭವಿಸಲು ಪ್ರಮುಖ ಕಾರಣವಾಗಿದೆ. ಆದ್ದರಿಂದ ಹೀಟರ್ ಫಿಕ್ಸ್ ಮಾಡುವಾಗ ಈ ಎಲ್ಲಾ ಅಂಶಗಳಿಂದ ದೂರವಿರುವಂತೆ ನೋಡಿಕೊಳ್ಳಿ. ಜೊತೆಗೆ, ಸಾಧ್ಯವಾದರೆ ಕಾಯಿಲ್ ಸ್ಪೇಸ್ ಹೀಟರ್‌ಗಳನ್ನು ತಪ್ಪಿಸಬೇಕು.
4.ಹಳೆಯ ವೈರಿಂಗ್
ನಿಮ್ಮ ಮನೆ ಇಪ್ಪತ್ತು ವರ್ಷಕ್ಕಿಂತ ಹಳೆಯದಾಗಿದ್ದರೆ, ಇಂದಿನ ಶಕ್ತಿಯುಳ್ಳ ಉಪಕರಣಗಳನ್ನು ನಿಭಾಯಿಸುವ ಸಾಮರ್ಥ್ಯವನ್ನು ಅದು ಹೊಂದಿರುವುದಿಲ್ಲ. ಇದರ ಜೊತೆಗೆ, ಹಳೆಯದಾದ ಬ್ರೇಕರ್ ಬಾಕ್ಸ್‌ಗಳು ಸಾಮಾನ್ಯವಾಗಿ ಕೆಲಸ ಮಾಡದ ಕನೆಕ್ಟರ್‌ಗಳನ್ನು ಹೊಂದಿರುತ್ತದೆ. ಇದರಿಂದಾಗಿ ಸಿಸ್ಟಮ್ ಓವರ್‌ಲೋಡ್ ಆಗುತ್ತದೆ. ಆದ್ದರಿಂದ ಹಳೆಯ ವೈರಿಂಗ್ ಇದ್ದರೆ, ಜಾಗರೂಕರಾಗಿರಿ.
5. ಲೈಟ್ ಬಳಿ, ಸುಡುವ ವಸ್ತುಗಳನ್ನು ಇಡುವುದು
ಲ್ಯಾಂಪ್‌ಶೇಡ್‌ನ ಮೇಲೆ ಬಟ್ಟೆ ಅಥವಾ ಕಾಗದವನ್ನು ಇಡುವುದರಿಂದ ವಸ್ತುವು ಬಿಸಿಯಾಗಬಹುದು. ಇದರಿಂದ ಬೆಂಕಿ ಹೊತ್ತಿಕೊಳ್ಳಬಹುದು. ಆದ್ದರಿಂದ ಬಲ್ಬ್ ಹತ್ತಿರ ಇಂತಹ ವಸ್ತು ಇರದಂತೆ ಜಾಗರೂಕತೆ ವಹಿಸುವುದು ಮುಖ್ಯ.
6. ಲೈಟ್ ಫಿಕ್ಚರ್‌ಗಳನ್ನು ಓವರ್‌ಲೋಡ್ ಮಾಡುವುದು
ಹೆಚ್ಚಿನ ವ್ಯಾಟೇಜ್ ಬಲ್ಬ್ ಅನ್ನು ಲ್ಯಾಂಪ್‌ಗಳು ಅಥವಾ ಲೈಟ್ ಫಿಕ್ಚರ್‌ಗಳಿಗೆ ಅಳವಡಿಸಲಾದ ಹೋಲ್ಡರ್‌ಗೆ ಹಾಕುವುದು ಸಹ ವಿದ್ಯುತ್ ಅವಘಡಕ್ಕೆ ಪ್ರಮುಖ ಕಾರಣವಾಗಿದೆ. ಹೆಚ್ಚಿನ ವ್ಯಾಟೇಜ್‌ನ್ನು ತಡೆದುಕೊಳ್ಳುವ ಶಕ್ತಿ ಆ ಹೋಲ್ಡರ್‌ಗೆ ಇರುವುದಿಲ್ಲ. ಏಕೆಂದರೆ, ಅದು ಕಡಿಮೆ ವ್ಯಾಟೇಜ್ ಬಲ್ಬ್‌ಗಳಿಗೆ ಮೀಸಲಾದ ಜಾಗವಾಗಿದೆ. ಆದ್ದರಿಂದ ಶಿಫಾರಸು ಮಾಡಲಾದ ವ್ಯಾಟೇಜ್‌ನಲ್ಲಿ ಯಾವಾಗಲೂ ಬಲ್ಬ್ ಹಾಕಿ.