ನವದೆಹಲಿ:ಸೆಂಟ್ರಲ್ ವಿಸ್ತಾ ಯೋಜನೆಯಂಗವಾಗಿ ನಿರ್ಮಿಸಲಾಗುತ್ತಿರುವ ನೂತನ ಸಂಸತ್ ಕಟ್ಟಡದ ಮೇಲ್ಭಾಗದಲ್ಲಿ ಸ್ಥಾಪಿಸಲಾಗಿರುವ ರಾಷ್ಟ್ರ ಲಾಂಛನದಲ್ಲಿ ಸಿಂಹದ ಕಲಾಕೃತಿಯ ವಿನ್ಯಾಸವು ಭಾರತದ ಲಾಂಛನ (ಅಸೂಕ್ತ ಬಳಕೆ ತಡೆ) ಕಾಯಿದೆ, 2005 ಇದನ್ನು ಉಲ್ಲಂಘಿಸುತ್ತಿದೆ ಎಂದು ದೂರಿ ದಾಖಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಸುಪ್ರೀಂ ಕೋರ್ಟ್ ಇಂದು ವಜಾಗೊಳಿಸಿದೆ.
ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಕೃಷ್ಣ ಮುರಾರಿ ಅವರ ಪೀಠವು ಅರ್ಜಿದಾರರದ್ದು ಕೇವಲ ಅನಿಸಿಕೆ ಎಂದು ಹೇಳಿದೆ. ``ಇಂತಹ ಅನಿಸಿಕೆ ವ್ಯಕ್ತಿಯ ಮನಸ್ಸನ್ನು ಅವಲಂಬಿಸಿದೆ ಹಾಗೂ 2005 ರ ಕಾಯಿದೆಯ ಯಾವುದೇ ಉಲ್ಲಂಘನೆಯಾಗಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಪ್ರಧಾನಿ ಮೋದಿ ಈ ವರ್ಷದ ಜುಲೈ ತಿಂಗಳಿನಲ್ಲಿ ಅನಾವರಣಗೊಳಿಸಿದ ಈ ರಾಷ್ಟ್ರ ಲಾಂಛನದ ಕಲಾಕೃತಿಯಲ್ಲಿ ಸಿಂಹಗಳು ಉಗ್ರ ಹಾಗೂ ಆಕ್ರಮಣಕಾರಿ ಮುಖಚರ್ಯೆ ಹೊಂದಿದೆ ಹಾಗೂ ಮೂಲ ರಾಷ್ಟ್ರಲಾಂಛನದಲ್ಲಿ ಸಿಂಹಗಳು ಶಾಂತಚಿತ್ತ ಮುಖಚರ್ಯೆ ಹೊಂದಿವೆ ಎಂದು ಅರ್ಜಿದಾರರು ವಾದಿಸಿದ್ದರು.