ಸುದ್ದಿಗಳನ್ನು ಪ್ರಸಾರ ಮಾಡುವಾಗ ತಟಸ್ಥ ನಿಲುವು ಹೊಂದಿರಬೇಕು ಹಾಗೂ ಟಿವಿ ಚಾನೆಲುಗಳಲ್ಲಿ ಅಬ್ಬರದಿಂದ ನಡೆಸುವ ಚರ್ಚಾ ಕಾರ್ಯಕ್ರಮಗಳನ್ನು ವೀಕ್ಷಕರ ಗಮನವನ್ನು ಸೆಳೆಯಬಹುದು ಆದರೆ ವಿಶ್ವಾಸಾರ್ಹತೆಯನ್ನು ಸಂಪಾದಿಸುವುದಿಲ್ಲ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.
"ಧ್ರುವೀಕರಿಸುವ ಉದ್ದೇಶ ಹೊಂದಿದ, ಸುಳ್ಳು ವಿಚಾರಗಳನ್ನು ಹರಡುವ ಮತ್ತು ದೊಡ್ಡ ದನಿಯಲ್ಲಿ ಮಾತನಾಡುವವರನ್ನು ಅತಿಥಿಗಳಾಗಿ ನೀವು ಆಹ್ವಾನಿಸಿದರೆ ನಿಮ್ಮ ಚಾನೆಲ್‍ನ ವಿಶ್ವಾಸಾರ್ಹತೆ ಕಡಿಮೆಯಾಗುತ್ತದೆ. ಅತಿಥಿಗಳು, ಅವರು ಮಾತನಾಡುವ ರೀತಿ ಹಾಗೂ ನೀವು ತೋರಿಸುವ ದೃಶ್ಯಗಳು ನಿಮ್ಮ ವೀಕ್ಷಕರ ಕಣ್ಣಿನಲ್ಲಿ ನಿಮ್ಮ ವಿಶ್ವಾಸಾರ್ಹತೆಯನ್ನು ವ್ಯಾಖ್ಯಾನಿಸುತ್ತದೆ,'' ಎಂದು ಠಾಕೂರ್ ಹೇಳಿದರು.
ಕೌಲಾಲಂಪುರ ಮೂಲದ ಯುನೈಟೆಡ್ ನೇಷನ್ಸ್ ಎಜುಕೇಶನಲ್, ಸೈಂಟಿಫಿಕ್ ಮತ್ತು ಕಲ್ಚರಲ್ ಆರ್ಗನೈಝೇಶನ್ ಇದರ ಅಂಗಸಂಸ್ಥೆಯಾಗಿರುವ ಏಷ್ಯಾ-ಪೆಸಿಫಿಕ್ ಇನ್‍ಸ್ಟಿಟ್ಯೂಟ್ ಫಾರ್ ಬ್ರಾಡ್‍ಕಾಸ್ಟಿಂಗ್ ಡೆವಲೆಪ್ಮೆಂಟ್ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡುತ್ತಿದ್ದರು.
ನೈಜ, ನಿಖರ ಮತ್ತು ವಿಶ್ವಾಸಾರ್ಹ ಸುದ್ದಿಗಳನ್ನು ಒದಗಿಸುವುದರ ಜೊತೆಗೆ ಮಾಧ್ಯಮ ರಂಗದ ನೈತಿಕತೆ ಮತ್ತು ಮೌಲ್ಯಗಳನ್ನು ಸಂರಕ್ಷಿಸುವ ದೊಡ್ಡ ಸವಾಲಯನ್ನು ಮುಖ್ಯವಾಹಿನಿ ಮಾಧ್ಯಮ ಸಂಸ್ಥೆಗಳು ಎದುರಿಸುತ್ತಿವೆ ಎಂದು ಸಚಿವರು ಹೇಳಿದರು.
ಪ್ರಬಲ ಸ್ಪರ್ಧೆಯ ಈ ಯುಗದಲ್ಲಿ ನಮ್ಮ ಮೌಲ್ಯಗಳೊಂದಿಗೆ ರಾಜಿ ಮಾಡಿಕೊಳ್ಳುವ ಬದಲು ನಾವು ನಮ್ಮ ವೃತ್ತಿಪರತೆಯನ್ನು ರಕ್ಷಿಸಲು ಶ್ರಮಿಸಬೇಕು ಎಂದು ಅವರು ಹೇಳಿದರು.