ಬದಿಯಡ್ಕ: ಸೋಮವಾರ ಬೆಳಗಿನ ಜಾವ ಮಾನ್ಯ ಹಾಗೂ ಪರಿಸರ ಪ್ರದೇಶಗಳಲ್ಲಿ ಬಲವಾದ ಗಾಳಿ ಬೀಸಿ ವಿವಿಧೆಡೆಗಳಲ್ಲಿ ವ್ಯಾಪಕ ಹಾನಿಯುಂಟಾಗಿದೆ. ಕೃಷಿ ನಾಶವಾಗಿರುವುದಲ್ಲದೆ ಅನೇಕ ಮರಗಳೂ ನೆಲಕ್ಕುರುಳಿವೆ. ಊರಿನಲ್ಲಿ ಸುಮಾರು 150ಕ್ಕೂ ಹೆಚ್ಚು ಮರಗಳು ಬುಡಸಮೇತ ನೆಲಕ್ಕುರುಳಿವೆ. 5 ಮನೆಗಳಿಗೂ ಹಾನಿಯಾಗಿದೆ. ಪಟ್ಟಾಜೆ ಉದಯಕುಮಾರ ಭಟ್ ಅವರ ಮನೆಯ ಹಿತ್ತಿಲಿನಲ್ಲಿದ್ದ ಬೃಹತ್ ಮಾವಿನಮರವೊಂದು ಬುಡಸಮೇತ ಕಿತ್ತು ಮನೆಯ ಮೇಲೆ ಬಿದ್ದು ಛಾವಣಿಗೆ ಸಂಪೂರ್ಣ ಹಾನಿಗೀಡಾಗಿದೆ. ಮೇಲ್ಛಾವಣಿ ಗಟ್ಟಿಯಾಗಿದ್ದುದರಿಂದ ಮನೆಯೊಳಗಿದ್ದವರಿಗೆ ಯಾವುದೇ ಗಾಯಗಳಾಗಿಲ್ಲ. ಮುರಿದು ಬಿದ್ದ ಮರವನ್ನು ತೆಗೆಯಲು ಕ್ರೇನ್ ಬಳಸಲಾಯಿತು.
ಹಿರಿಯರಾದ ಕಂಬಾರು ಸುಬ್ರಹ್ಮಣ್ಯ ಭಟ್ ಅವರ ಮನೆಯ ಪರಿಸರದಲ್ಲಿಯೂ ವ್ಯಾಪಕವಾಗಿ ಸುಳಿಗಾಳಿ ಬೀಸಿದ್ದು, ಮನೆಯ ಮಾಡಿಗೆ ಮರ ಬಿದ್ದಿರುವುದಲ್ಲದೆ ಶೆಡ್‍ಗೆ ಹಾಸಿದ ಶೀಟ್ ಹಾರಿಹೋಗಿದೆ. ಸಮೀಪದ ಪಟ್ಟಾಜೆಯ ಕೃಷ್ಣ ನಾಯ್ಕ ಅವರ ಶೆಡ್‍ನ ಶೀಟ್ ಹಾರಿಹೋಗಿದೆ. ಪರಿಸರ ಪ್ರದೇಶದ ಅಡಿಕೆ, ರಬ್ಬರ್ ತೋಟಗಳಿಗೂ ಹಾನಿಯುಂಟಾಗಿದೆ. 17ನೇ ವಾರ್ಡು ಮಲ್ಲಡ್ಕದಲ್ಲಿಯೂ ಕೃಷಿಗೆ ಹಾನಿಯುಂಟಾಗಿದೆ. ವಿವಿಧೆಡೆಗಳಲ್ಲಿ ಅಡಿಕೆ, ತೆಂಗು, ಬಾಳೆ, ರಬ್ಬರ್ ಮರಗಳು ನೆಲಕ್ಕುರುಳಿವೆ. ವಿಲೇಜ್ ಅಕಾರಿಗಳು, ಕೃಷಿ ಭವನ ಅಧಿಕಾರಿಗಳು, ವಾರ್ಡು ಸದಸ್ಯರುಗಳಾದ ಸ್ವಪ್ನ, ಶ್ಯಾಮಪ್ರಸಾದ ಮಾನ್ಯ, ಬ್ಲಾಕ್ ಪಂಚಾಯಿತಿ ಸದಸ್ಯೆ ಅಶ್ವಿನಿ ಭಟ್ ನೀರ್ಚಾಲು ಮೊದಲಾದವರು ಹಾನಿಯುಂಟಾದ ಸ್ಥಳಕ್ಕೇ ಭೇಟಿ ನೀಡಿದ್ದರು.