ನವದೆಹಲಿ: ಚೆಕ್ ನೀಡುವವರು (ಡ್ರಾಯರ್) ವಿವರಗಳನ್ನು ಬೇರೆಯವ ರಿಂದ ತುಂಬಿಸಿಕೊಂಡರೂ ಅದಕ್ಕೆ ಸಹಿ ಹಾಕುವ ಖಾತೆದಾರರೇ ಚೆಕ್ಗೆ ಬಾಧ್ಯರಾಗಿರುತ್ತಾರೆ ಎಂದು ಸುಪ್ರೀಂ ಕೋಟ್ ಮಹತ್ವದ ತೀರ್ಪು ನೀಡಿದೆ. ಚೆಕ್ಗೆ ಸಹಿ ಹಾಕಿ ಹಣ ಪಾವತಿಯಾಗ ಬೇಕಿರುವವರಿಗೆ (ಪೇಯಿ) ಕೊಡುವ ಡ್ರಾಯರ್ ಅವರೇ ಎಲ್ಲದಕ್ಕೂ ಹೊಣೆಯಾಗಿರುತ್ತಾರೆ ಎಂದು ನ್ಯಾಯಮೂರ್ತಿಗಳಾದ ಡಿ.ವೈ.
ಚಂದ್ರಚೂಡ್ ಮತ್ತು ಎ.ಎಸ್. ಬೋಪಣ್ಣ ಅವರಿದ್ದ ಪೀಠ ಅಭಿಪ್ರಾಯ ಪಟ್ಟಿದೆ.
ಚೆಕ್ ಬೌನ್ಸ್ ಪ್ರಕರಣವೊಂದರಲ್ಲಿ ಮೇಲ್ಮನವಿ ಅರ್ಜಿ ವಿಚಾರಣೆಗೆ ಅನುಮತಿ ನೀಡುವ ಸಂದರ್ಭ ನ್ಯಾಯಮೂರ್ತಿಗಳು ಈ ನಿಲುವನ್ನು ವ್ಯಕ್ತಪಡಿಸಿದ್ದಾರೆ. ಚೆಕ್ಕನ್ನು ಡ್ರಾಯರ್ ಭರ್ತಿ ಮಾಡಿಲ್ಲ ಎಂಬ ಒಂದೇ ಕಾರಣಕ್ಕೆ ಕೈಬರಹ ತಜ್ಞರು ಸಹಿಯನ್ನು ಅಮಾನ್ಯ ಮಾಡುವಂತಿಲ್ಲ ಎಂದು ಕೋರ್ಟ್ ಹೇಳಿದೆ. ಪೇಯಿ ಒಬ್ಬರಿಗೆ ಖಾಲಿ (ಬ್ಲ್ಯಾಂಕ್) ಚೆಕ್ ನೀಡಿದ್ದಾಗಿ ಈ ಪ್ರಕರಣದ ಆರೋಪಿ ಒಪ್ಪಿಕೊಂಡಿದ್ದಾರೆ. ಹಾಗೂ ಆ ಚೆಕ್ನಲ್ಲಿ ತುಂಬಿದ್ದ ವಿವರಗಳು ಆತನ ಕೈಬರಹದ್ದು ಹೌದೇ ಅಲ್ಲವೇ ಎಂಬುದನ್ನು ಪರಿಶೀಲಿಸಲು ಕೈಬರಹ ತಜ್ಞರನ್ನು ನೇಮಿಸಲು ದೆಹಲಿ ಹೈ ಕೋರ್ಟ್ ಅನುಮತಿ ನೀಡಿತ್ತು. ಆದರೆ ವಿವರಗಳನ್ನು ಬೇರೆ ಯಾರೋ ಭರ್ತಿ ಮಾಡಿದ್ದಾರೆ ಎನ್ನುವುದು ಅಪ್ರಸ್ತುತ ವಾಗುತ್ತದೆ ಎನ್ನುವುದು ಕೋರ್ಟ್ನ ಸ್ಪಷ್ಟ ಅಭಿಪ್ರಾಯವಾಗಿದೆ.