ನವದೆಹಲಿ: ದೋಷಪೂರಿತ ರಸ್ತೆ ವಿನ್ಯಾಸಗಳೇ ಅಪಘಾತಗಳಿಗೆ ಕಾರಣ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸೋಮವಾರ ಅಭಿಪ್ರಾಯಪಟ್ಟಿದ್ದಾರೆ.
ಹೆದ್ದಾರಿಗಳು ಮತ್ತು ಇತರ ರಸ್ತೆಗಳ ನಿರ್ಮಾಣಕ್ಕಾಗಿ ವಿವರವಾದ ಯೋಜನಾ ವರದಿಗಳನ್ನು ತಯಾರಿಸಲು ಕಂಪನಿಗಳಿಗೆ ಸರಿಯಾದ ತರಬೇತಿಯ ಅಗತ್ಯವಿದೆ ಎಂದೂ ಅವರು ಒತ್ತಿ ಹೇಳಿದ್ದಾರೆ.
ಇದಕ್ಕಾಗಿ ಸರ್ಕಾರವು ಹೊಸ ತಂತ್ರಜ್ಞಾನಗಳನ್ನು ಬಳಸಲು ಪ್ರೋತ್ಸಾಹ ನೀಡುತ್ತಿದೆ ಎಂದಿದ್ದಾರೆ.
ಕಂಪನಿಗಳು ತಯಾರಿಸಿರುವ ಕೆಲವು ವಿಸೃತ ಯೋಜನಾ ವರದಿಗಳು (ಡಿ.ಪಿ.ಆರ್) ಅತ್ಯಂತ ಕೆಟ್ಟದಾಗಿರುತ್ತವೆ ಎಂದೂ ಸಚಿವರು ತಿಳಿಸಿದ್ದಾರೆ.
ಕೌಶಲವಿಲ್ಲದ ಚಾಲಕರ ಕೈಗೆ ಹೊಸ ಮರ್ಸಿಡಿಸ್ ಕಾರು ಕೊಟ್ಟರೆ ಅದರಿಂದ ತೊಂದರೆ ಉಂಟಾಗಬಹುದು ಎಂದೂ ಸಚಿವರು ಲಘು ದಾಟಿಯಲ್ಲಿ ಹೇಳಿದ್ದಾರೆ.