ಕೋಲ್ಕತ್ತ: ಇಂಟರ್‌ನ್ಯಾಷನಲ್ ಫೆಡರೇಷನ್ ಆಫ್ ಅಸೋಶಿಯೇಷನ್ ಫುಟ್‌ಬಾಲ್ (ಎಫ್‌ಐಎಫ್‌ಎ) ಅಧ್ಯಕ್ಷ ಗಿಯಾನಿ ಇನ್ಫಾಂಟಿನೋ ಅಕ್ಟೋಬರ್‌ನಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.
ಗಿಯಾನಿ ಇನ್ಫಾಂಟಿನೋ ಅವರ ಭಾರತ ಭೇಟಿಯ ಅಧಿಕೃತ ಪ್ರಕಟಣೆ ಫಿಫಾದಿಂದ ಇನ್ನೂ ಹೊರ ಬಿದ್ದಿಲ್ಲ. ಆದರೆ, ಅಕ್ಟೋಬರ್ ಕೊನೆಯ ವಾರದಲ್ಲಿ ಅವರು ಭಾರತಕ್ಕೆ ಭೇಟಿ ನೀಡುವುದು ಬಹುತೇಕ ಅಂತಿಮವಾಗಿದೆ ಎಂದು ತಿಳಿದು ಬಂದಿದೆ.
ಸೋಮವಾರ ನಡೆದ 'ಆಲ್ ಇಂಡಿಯಾ ಫುಟ್‌ಬಾಲ್ ಫೆಡರೇಷನ್' (ಎಐಎಫ್‌ಎಫ್) ಕಾರ್ಯಕಾರಿ ಮಂಡಳಿಯ ಸಭೆಯಲ್ಲಿ ಈ ಮಾಹಿತಿ ಹೊರ ಬಿದ್ದಿದೆ.
ಇತ್ತೀಚೆಗೆ ಅಂತರಾಷ್ಟ್ರೀಯ ಫುಟ್‌ಬಾಲ್ ಪಂದ್ಯಗಳಲ್ಲಿ ಭಾಗವಹಿಸದಂತೆ ಫಿಪಾ ಭಾರತದ ಮೇಲೆ ನಿಷೇಧ ಹೇರಿದ್ದು ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಫಿಪಾ ಅಧ್ಯಕ್ಷರ ಭಾರತ ಭೇಟಿ ಮಹತ್ವ ಪಡೆದುಕೊಂಡಿದೆ. ಇದರಿಂದ ಇಂಡಿಯನ್ ಫುಟ್‌ಬಾಲ್ ವಲಯದಲ್ಲಿ ಬೆಳವಣಿಗೆಗಳು ಗರಿಗೆದರಿವೆ.
ಗಿಯಾನಿ ಇನ್ಫಾಂಟಿನೋ ಅವರು ತಮ್ಮ ಭಾರತ ಭೇಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಸಹ ಭೇಟಿಯಾಗಿ ಭಾರತೀಯ ಫುಟ್‌ಬಾಲ್ ಬೆಳವಣಿಗೆ ಬಗ್ಗೆ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ. ಅಕ್ಟೋಬರ್ 11 ರಿಂದ 30 ರವರೆಗೆ 17 ವರ್ಷದೊಳಗಿನ ಮಹಿಳಾ ಫುಟ್‌ಬಾಲ್ ವಿಶ್ವಕಪ್ ಪಂದ್ಯಾವಳಿಗಳು ಭಾರತದಲ್ಲಿ ಆಯೋಜನೆಗೊಂಡಿವೆ. ಇದರ ಅಂಗವಾಗಿ ಗಿಯಾನಿ ಇನ್ಫಾಂಟಿನೋ ಭಾರತಕ್ಕೆ ಬರಲಿದ್ದಾರೆ ಎನ್ನಲಾಗಿದೆ.
ಕಾರ್ಯಕಾರಿ ಮಂಡಳಿಯ ಸಭೆಯಲ್ಲಿ ಫಿಫಾ ಅಧ್ಯಕ್ಷರ ಭೇಟಿಯ ಬಗ್ಗೆ ವಿಸ್ತೃತವಾಗಿ ಚರ್ಚೆಯಾಗಿದೆ. ಅವರ ಭಾರತ ಭೇಟಿ ಭಾರತೀಯ ಫುಟ್‌ಬಾಲ್‌ಗೆ ಮಹತ್ವದ್ದಾಗಿದೆ ಎಂದು ಎಐಎಫ್‌ಎಫ್ ಪ್ರಧಾನ ಕಾರ್ಯದರ್ಶಿ ಶಾಜಿ ಪ್ರಭಾಕರನ್ ಅವರು ತಿಳಿಸಿದ್ದಾರೆ.
ಎಐಎಫ್‌ಎಫ್ ಅಧ್ಯಕ್ಷರಾಗಿ ಕಲ್ಯಾಣ್ ಚುಬೆ ಅವರು ಅಧಿಕಾರ ವಹಿಸಿಕೊಂಡ ನಂತರ ಕಾರ್ಯಕಾರಿ ಮಂಡಳಿಯ ಎರಡನೇ ಸಭೆ ಸೋಮವಾರ ನಡೆದಿದೆ. ಕಲ್ಯಾಣ್ ಚುಬೆ ಅವರು ಭಾರತದ ಮಾಜಿ ಫುಟ್‌ಬಾಲ್ ಆಟಗಾರ ಹಾಗೂ ಪಶ್ಚಿಮ ಬಂಗಾಳದ ಬಿಜೆಪಿ ನಾಯಕರಾಗಿದ್ದಾರೆ.