ಕಾಸರಗೋಡು: ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ವತಿಯಿಂದ ಓಣಂ ಆಚರಣೆಯ ಅಂಗವಾಗಿ ಕಾಸರಗೋಡು ವಿದ್ಯಾನಗರದಲ್ಲಿ ವಿಶೇಷ ಚೇತನರಿಗಾಗಿ ಆಯೋಜಿಸಲಾಗಿದ್ದ ಓಣಂ ವಿಶಿಷ್ಟ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಆಲ್ ಕೇರಳ ವೀಲ್‍ಚೇರ್ ರೈಟ್ ಫೆಡರೇಶನ್ ಸಂಘಟನೆಯ ಸಹ ಸ್ಥಾಪಕ ಸಂತೋಷ ಮಾಳಿಕಲ್ ಹಾಗೂ ಉಳಿಕಲ್ ನಿವಾಸಿ ರಾಜ್ಯ ಸರ್ಕಾರದ 'ಕಾರ್ಶಿಕೋತ್ತಮ ಪ್ರಶಸ್ತಿ' ವಿಜೇತ ಶಾಜಿ ಮ್ಯಾಥ್ಯೂ ಅವರು ಬೇಕಲ ಕೋಟೆಗೆ ಭೇಟಿ ನೀಡಿ ಓಣಂ ಸಂಭ್ರಮಾಚರಿಸಿದರು.
ಗಾಲಿಕುರ್ಚಿಯೊಂದಿಗೆ ವಹನದಲ್ಲಿ ಆಗಮಿಸಿದ್ದ ಇವರಿಗೆ ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳು ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಕೋಟೆಯೊಳಗೆ ಪ್ರವೇಶಿಸಲು ಅನುಮತಿ ನೀಡಿದ ನಂತರ, ಇವರಿಬ್ಬರೂ ಗಾಲಿಕುರ್ಚಿಯಲ್ಲಿ ವಾಚ್ ಟವರ್ ತಲುಪಿದರು. ವಿಕಲಚೇತನರಾಗಿರುವ ತಮಗೆ ವಿಶಾಲವಾದ ಅರಬ್ಬಿ ಸಮುದ್ರ ಮತ್ತು ಕೇರಳದ ಅತಿದೊಡ್ಡ ಕೋಟೆಯನ್ನು ನೋಡಲು ಸಾಧ್ಯವಾಯಿತು ಎಂದು ಅವರು ತಿಳಿಸಿದ್ದಾರೆ. ಈ ಸಂದರ್ಭ ಎನ್ನೆಸ್ಸೆಸ್ ಹಾಗೂ ಎನ್‍ಸಿಸಿ ಕೆಡೆಟ್‍ಗಳ ಸಹಾಯವೂ ಸಿಕ್ಕಿತು. ರಾಜ್ಯದಲ್ಲಿರುವ ಎಲ್ಲಾ ಐತಿಹಾಸಿಕ ಸ್ಮಾರಕಗಳು ಮತ್ತು ಪ್ರವಾಸಿ ತಾಣಗಳಲ್ಲಿ, ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳಂತೆ ವಿಕಲಚೇತನರ ಸ್ನೇಹಿ ಮತ್ತು ಪ್ರವಾಸಿಗರಿಗೆ ಸಹಾಯಕವಾಗಿದ್ದರೆ, ನಮ್ಮಂತಹ ಅನೇಕ ವಿಕಲಚೇತನರಿಗೆ ಪ್ರವಾಸಿ ತಾಣಗಳನ್ನು ಕಂಡು ಸೌಂದರ್ಯ ಆಸ್ವಾದಿಸಲು ಸಾಧ್ಯವಾಗಬಹುದು ಎಂದು ತಿಳಿಸಿದರು. ಬೇಕಲ ಕೋಟೆಯ ಪ್ರಭಾರಿ ಶಾಜು, ಡಿಟಿಪಿಸಿ ಕಾರ್ಯದರ್ಶಿ ಲಿಜೋ ಜೋಸೆಫ್ ಮತ್ತು ಡಿಟಿಪಿಸಿ ಮತ್ತು ಬೇಕಲ ಕೋಟೆಯ ಇತರ ಸಿಬ್ಬಂದಿ ಉಪಸ್ಥಿತರಿದ್ದರು.
ಡಿಟಿಪಿಸಿ ವತಿಯಿಂದ ಬೇಕಲ ಕೋಟೆಯಲ್ಲಿ ಓಣಂ ಸಂಭ್ರಮಾಚರಣೆ
0
ಸೆಪ್ಟೆಂಬರ್ 11, 2022