ಕೋಲ್ಕತಾ: ತಮ್ಮ ನೆಚ್ಚಿನ ಶಿಕ್ಷಕರು ಬೇರೆಡೆ ವರ್ಗಾವಣೆಯಾದರೆ ಮಕ್ಕಳು ಅಳುವುದು, ಭಾರಿ ಪ್ರಮಾಣದಲ್ಲಿ ಗಲಾಟೆ ಮಾಡುವುದು ಮಾಮೂಲು. ಆದರೆ ಇಲ್ಲಿಯ ವಿದ್ಯಾರ್ಥಿಗಳು ರೈಲನ್ನೇ ತಡೆಹಿಡಿದಿದ್ದಾರೆ!
ಕೋಲ್ಕತಾದ ಸೀಲ್ದಾಹ್ ದಕ್ಷಿಣ ವಿಭಾಗದ ಗೌರ್ದಾಹ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.
ಇಲ್ಲಿಯ ಕ್ಯಾನಿಂಗ್‌ನಲ್ಲಿರುವ ಗೌರ್ದಾಹ್ ನಾರಾಯಣಪುರ ಅಕ್ಷಯ ವಿದ್ಯಾಮಂದಿರದ ವಿದ್ಯಾರ್ಥಿಗಳು ಇಂಥದ್ದೊಂದು ಸಾಹಸಕ್ಕೆ ಕೈ ಹಾಕಿದವರು.
ಈ ಶಾಲೆಯ ಒಟ್ಟೂ ಐದು ಶಿಕ್ಷಕರನ್ನು ಒಟ್ಟಿಗೇ ವರ್ಗಾವಣೆ ಮಾಡಿರುವುದು ಮಕ್ಕಳ ಆಕ್ರೋಶಕ್ಕೆ ಕಾರಣವಾಗಿದೆ. ಗೌರ್ದಾಹ್ ನಿಲ್ದಾಣದಲ್ಲಿ ರೈಲು ತಡೆದು ಐವರು ಶಿಕ್ಷಕರ ವರ್ಗಾವಣೆ ನಿರ್ಧಾರ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ. ಇಲ್ಲದಿದ್ದರೆ ರೈಲು ತಡೆ ಮುಂದುವರೆಸುವುದಾಗಿಯೂ ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ. ಘಟನೆಯಿಂದ ನಿಲ್ದಾಣದ ಆವರಣದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣಗೊಂಡಿದೆ. ರೈಲ್ವೆ ಸಿಬ್ಬಂದಿ ಕೂಡ ಘಟನೆಯಿಂದ ಸುಸ್ತಾದರು!
ಈ ಕುರಿತು ಮಾತನಾಡಿದ ವಿದ್ಯಾರ್ಥಿಗಳು, 'ನಮ್ಮ ಪ್ರದೇಶದಲ್ಲಿ ಹಲವಾರು ಶಾಲೆಗಳಿವೆ. ಪ್ರತಿ ಶಾಲೆಯಿಂದ ಒಬ್ಬ ಶಿಕ್ಷಕರನ್ನು ವರ್ಗಾವಣೆ ಮಾಡಿದರೆ ಸಮಸ್ಯೆಯಾಗುತ್ತಿರಲಿಲ್ಲ. ಆದರೆ ಒಂದು ಶಾಲೆಯಿಂದ ಐವರು ಶಿಕ್ಷಕರನ್ನು ವರ್ಗಾವಣೆ ಮಾಡುವುದರಿಂದ ನಮ್ಮ ಶಿಕ್ಷಣಕ್ಕೆ ಪೆಟ್ಟು ಬೀಳುತ್ತದೆ. ನಮ್ಮ ಶಾಲೆಯಲ್ಲಿ 11 ಮತ್ತು 12 ನೇ ತರಗತಿಯಲ್ಲಿ ಕೇವಲ 3 ಶಿಕ್ಷಕರಿದ್ದಾರೆ. ಹೀಗಾಗಿ ಕೂಡಲೇ ನಿರ್ಧಾರ ಹಿಂಪಡೆಯಬೇಕು' ಎಂದಿದ್ದಾರೆ.