ಕಾಸರಗೋಡು: ಜಿಲ್ಲೆಯ ಕೊರಗ ಸಮುದಾಯದ ಅಭಿವೃದ್ಧಿಗಾಗಿ ಪರಿಶಿಷ್ಟ ಪಂಗಡ ಅಭಿವೃದ್ಧಿ ಇಲಾಖೆ ಸಮಗ್ರ ಯೋಜನೆ ಅನುಷ್ಠಾನಗೊಳಿಸುತ್ತಿದ್ದು, ಇದಕ್ಕಾಗಿ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್ ಚಂದ್ ಅವರ ಟಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಜಂಟಿ ಸಭೆ ಶೀಘ್ರ ನಡೆಯಲಿದೆ ಎಂದು ಪ.ಪಂಗಡ ಅಭಿವೃದ್ಧಿ ಅಧಿಕಾರಿ ಎಂ.ಮಲ್ಲಿಕಾ ತಿಳಿಸಿದ್ದಾರೆ.
ಸಭೆಯಲ್ಲಿ ಎಡಿಪಿ, ಡಿಎಫ್‍ಒ, ಪ್ರಧಾನ ಕೃಷಿ ಅಧಿಕಾರಿ, ಪಶುಸಂಗೋಪನಾ ಇಲಾಖೆ ಅಧಿಕಾರಿ, ಕುಟುಂಬಶ್ರೀ ಜಿಲ್ಲಾ ಮಿಷನ್ ಸಂಯೋಜಕರು, ಜಿಲ್ಲಾ ಕೈಗಾರಿಕಾ ಕೇಂದ್ರದ ಪ್ರಧಾನ ವ್ಯವಸ್ಥಾಪಕರು, ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ವಿಶೇಷಾಧಿಕಾರಿ ಮೊದಲಾದವರು ಭಾಗವಹಿಸಲಿದ್ದಾರೆ.
ಕೊರಗ ಸಮುದಾಯಕ್ಕಾಗಿ ಕೃಷಿ ಮಾಡಲಿರುವ ಸೌಲಭ್ಯಗಳು, ಕೃಷಿ ಸಂಬಂಧಿತ ಸಮಸ್ಯೆಗಳು, ಲೈಫ್ ಮಿಷನ್‍ಗೆ ಸಂಬಂಧಿಸಿದ ಸಮಸ್ಯೆಗಳು ಇತ್ಯಾದಿಗಳ ಬಗ್ಗೆ ಚರ್ಚಿಸಲಾಗುವುದು. ಕೊರಗ ವಿಭಾಗದಲ್ಲಿ ಶಿಕ್ಷಣ ಪಡೆದವರಿಗೆ ಉದ್ಯೋಗ ಕೌಶಲ್ಯ ತರಬೇತಿ ನೀಡಿ ಉದ್ಯೋಗ ಕಲ್ಪಿಸುವ ಯೋಜನೆಯೂ ಇದರಲ್ಲಿ ಒಳಗೊಂಡಿದೆ. ಒಂದು ಕುಟುಂಬದಲ್ಲಿ ಕನಿಷ್ಠ ಒಬ್ಬರಿಗೆ ಉದ್ಯೋಗ ದೊರಕಿಸಿ ಕೊಡುವುದು ಇದರ ಉದ್ದೇಶವಾಗಿದೆ. ಕುಂಜತ್ತೂರಿನ ಕೊರಗ ವಿಭಾಗಕ್ಕೆ ಟಿಆರ್ ಡಿಎಂ (ಗಿರಿಜನ ಪುನರ್ ವಸತಿ ಅಭಿವೃದ್ಧಿ ಮಿಷನ್) ವತಿಯಿಂದ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು.
ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್ ಚಂದ್ ಅವರು ಆಗಸ್ಟ್ 12ರಂದು ಬದಿಯಡ್ಕ ಪಂಚಾಯಿತಿಯ ಪೆರಡಾಲ ಕೊರಗ ಕೋಲನಿಗೆ ಭೇಟಿ ನೀಡಿ ಸಮಗ್ರ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸುವಂತೆ ವಿವಿಧ ಇಲಾಖೆಗಳಿಗೆ ಸೂಚನೆಯನ್ನು ನೀಡಿದ್ದಾರೆ. ಇದರ ಆಧಾರದ ಮೇಲೆ ಇಲಾಖೆಗಳ ಸಭೆ ನಡೆಸಲಾಗುತ್ತದೆ. ಪೆರಡಾಲದಲ್ಲಿ 45 ಕುಟುಂಬಗಳು ವಾಸವಾಗಿವೆ. ಪರಿಶಿಷ್ಟ ಪಂಗಡ ಅಭಿವೃದ್ಧಿ ಇಲಾಖೆ ವತಿಯಿಂದ ಇವರಿಗಾಗಿ 25 ಲಕ್ಷ ರೂಪಾಯಿ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಿಸಲಾಗುವುದು. ಜಿಲ್ಲೆಯಲ್ಲಿ ಕೊರಗ ವಿಭಾಗವು ಒಟ್ಟು 575 ಮಂದಿ ಜನಸಂಖ್ಯೆಯನ್ನು ಹೊಂದಿದೆ.
ಕೊರಗ ಸಮುದಾಯದ ಸಮಗ್ರ ಅಭಿವೃದ್ಧಿಗೆ ಯೋಜನೆ: ವಿವಿಧ ಇಲಾಖೆಗಳ ಜಂಟಿ ಸಭೆ ಶೀಘ್ರ
0
ಸೆಪ್ಟೆಂಬರ್ 05, 2022
Tags