ಕಾಸರಗೋಡು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯ(ಪಿಎಫ್‍ಐ)ದ ವಿವಿಧ ಕಚೇರಿ ಹಾಗೂ ಮುಖಂಡರ ಮನೆಗಳಿಗೆ ನಡೆದ ದಾಳಿ ಖಂಡಿಸಿ ರಾಜ್ಯದಲ್ಲಿ ಗುರುವಾರ ನಡೆದ ಹರತಾಳ ವ್ಯಾಪಕ ಹಿಂಸಾಚಾರಕ್ಕೆ ಕಾರಣವಾಯಿತು. ಕಾಸರಗೋಡು ನಗರದಲ್ಲಿ ಅಂಗಡಿ ಮುಂಗಟ್ಟು ಮುಚ್ಚಿಕೊಂಡಿತ್ತು.
ಕಾಸರಗೋಡು ನಗರದಲ್ಲಿ ಪೊಲೀಸ್ ಬೆಂಗಾವಲಿನೊಂದಿಗೆ ಕೆಎಸ್ಸಾರ್ಟಿಸಿ ಬಸ್ ಸಂಚಾರ ನಡೆಸಿತು. ಜನಸಂಚಾರ ವಿರಳವಾಗಿದ್ದ ಹಿನ್ನೆಲೆಯಲ್ಲಿ ನಂತರ ಬಸ್ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಖಾಸಗಿ ಬಸ್‍ಗಳು, ಟ್ಯಾಕ್ಸಿಗಳು ಸಂಚಾರ ಸ್ಥಗಿತಗೊಳಿಸಿತ್ತು. ಕೆಲವೊಂದು ದ್ವಿಚಕ್ರವಾಹನಗಳು, ಕೆಲವೊಂದು ಖಾಸಗಿ ವಾಹನಗಳು ಸಂಚಾರ ನಡೆಸಿತ್ತು. ಸರ್ಕಾರಿ ಕಚೇರಿಗಳು ತೆರೆದು ಕಾರ್ಯಾಚರಿಸಿದರೂ, ಸಿಬ್ಬಂದಿ ಸಂಖ್ಯೆ ಕಡಿಮೆಯಿತ್ತು. ಜಿಲ್ಲೆಯ ಬಹುತೇಕ ಕಡೆ ವ್ಯಾಪಾರ ಸಂಸ್ಥೆಗಳು ತೆರೆದು ಕಾರ್ಯಾಚರಿಸಿತು. ಮೊಗ್ರಾಲ್‍ಪುತ್ತೂರು ಕೊಪ್ಪರಬಜಾರ್‍ನಲ್ಲಿ ಕಿಡಿಗೇಡಿಗಳು ಲಾರಿಯೊಂದಕ್ಕೆ ಕಲ್ಲೆಸೆದು ಹಾನಿಗೊಳಿಸಿದ್ದಾರೆ. ಕಣ್ಣೂರಿನಲ್ಲಿ ಬೈಕ್ ಮೇಲೆ ಪೆಟ್ರೋಲ್ ಬಾಂಬು ಎಸೆಯಲಾಗಿದೆ. ಕೋಯಿಕ್ಕೋಡ್ ಸಿವಿಲ್‍ಸ್ಟೇಶನ್ ಸನಿಹ ಕೆಎಸ್ಸಾರ್ಟಿಸಿ ಬಸ್‍ಗೆ ಕಲ್ಲೆಸೆಯಲಾಗಿದ್ದು, ಚಾಲಕ ಗಾಯಗೊಂಡಿದ್ದಾನೆ. ತಿರುವನಬಂತೊಉರದಲ್ಲೂ ವ್ಯಾಪಕವಾಗಿ ಬಸ್‍ಗಳಿಗೆ, ಖಾಸಗಿ ವಾಹನಗಳಿಗೆ ಕಲ್ಲೆಸೆತವುಂಟಾಗಿದೆ, ಹರತಾಳ ಬೆಂಬಲಿಗರು ಕಾಸರಗೋಡು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಕೇಸು ದಾಖಲಿಸಿದ ಹೈಕೋರ್ಟು:
ಹೈಕೋರ್ಟಿನ ಆದೇಶ ಉಲ್ಲಂಘಿಸಿ ಮಿಂಚಿನ ಹರತಾಳ ನಡೆಸಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯ(ಪಿಎಫ್‍ಐ) ವಿರುದ್ಧ ರಾಜ್ಯ ಉಚ್ಛ ನ್ಯಾಯಾಲಯ ಸ್ವಿಚ್ಛೆಯಿಂದ ಕೇಸು ದಾಖಲಿಸಿಕೊಂಡಿದೆ. ಹರತಾಳ ಕಾನೂನು ವಿರುದ್ಧವಾಗಿದ್ದು, ಹೈಕೋರ್ಟು ಈ ಹಿಂದೆ ನೀಡಿದ್ದ ತೀರ್ಪಿಗೆ ವಿರುದ್ಧವಾಗಿದೆ ಎಂದು ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ. ಹರತಾಳಕ್ಕೆ ಆಹ್ವಾನ ನೀಡಿದವರ ವಿರುದ್ಧ ಹಾಗೂ ಖಾಸಗಿ ಸೊತ್ತು ನಾಶಗೊಳಿಸಿದವರ ವಿರುದ್ಧ ಪ್ರತ್ಯೇಕ ಕೇಸು ದಆಖಲಿಸುವಂತೆ ನ್ಯಾಯಾಲಯ ಆದೇಶಿಸಿದೆ.
ಎಸ್‍ಡಿಪಿಐ ಕಾರ್ಯಕರ್ತರಿಗೆ ಸಾರ್ವಜನಿಕರಿಂದ ಗೂಸಾ:
ಪಯ್ಯನ್ನೂರಿನಲ್ಲಿ ಅಂಗಡಿಮುಂಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸಲು ಯತ್ನಿಸಿದ ಎಸ್‍ಡಿಪಿಐ ಕಾರ್ಯಕರ್ತರನ್ನು ಸಾರ್ವಜನಿಕರು ಸೇರಿ ಹಿಗ್ಗಾಮುಗ್ಗ ಥಳಿಸಿ ಓಡಿಸಿದ್ದಾರೆ. ತೆರೆದು ಕಾರ್ಯಾಚರಿಸುತ್ತಿದ್ದ ವ್ಯಾಪಾರಿ ಸಂಸ್ಥೆಗಳನ್ನು ಮುಚ್ಚುವಂತೆ ಎಸ್‍ಡಿಪಿಐ ಸಂಘಟನೆಯ ಒಂದು ತಂಡ ವ್ಯಪಾರಿಗಳಿಗೆ ಬೆದರಿಕೆ ಹಾಗಿ, ಬಲವಂತದಿಂದ ಅಂಗಡಿ ಮುಚ್ಚಿಸಲು ಯತರ್ನಿಸುತ್ತಿದ್ದಂತೆ ಕುಪಿತಗೊಂಡ ಸಾರ್ವಜನಿಕರು ಇವರನ್ನು ಬೆನ್ನಟ್ಟಿ ಗೂಸಾ ನೀಡಿದ್ದರೆ. ಮಾಹಿತಿ ಪಡೆದು ಸ್ಥಳಕ್ಕಾಗಮಿಸಿದ ಪೊಲೀಸರು ಹರತಾಳ ಬೆಂಬಲಿಗರಾದ ಮುನೀರ್, ನರ್ಶಾದ್.ಸಿ.ಕೆ ಹಾಗೂ ಸುಹೈಬ್ ಎಂಬವರನ್ನು ಬಂಧಿಸಿದ್ದಾರೆ.