ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಬಿಜೆಪಿ ಮುಖಂಡ ಗುಲಾಮ್ ಅಲಿ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಗಿದೆ. ಕೇಂದ್ರ ಸರ್ಕಾರದ ಶಿಫಾರಸಿನ ಮೇರೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈ ನೇಮಕಾತಿಯನ್ನು ಮಾಡಿದ್ದಾರೆ. ಇವರು ಜಮ್ಮುವಿನ ಬತಿಂಡಿ ನಿವಾಸಿಯಾಗಿದ್ದಾರೆ.
ನಾಮನಿರ್ದೇಶಿತ ಸದಸ್ಯರಲ್ಲಿ ಒಬ್ಬರ ನಿವೃತ್ತಿಯಿಂದಾಗಿ ತೆರವಾದ ಸ್ಥಾನವನ್ನು ತುಂಬಲು ಗುಲಾಮ್ ಅಲಿ ಅವರನ್ನು ಕೌನ್ಸಿಲ್ ಆಫ್ ಸ್ಟೇಟ್ಸ್‌ಗೆ ನಾಮನಿರ್ದೇಶನ ಮಾಡಲಾಗಿದೆ ಎಂದು ತಿಳಿಸಲಾಗಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಜಮ್ಮು ಕಾಶ್ಮೀರದ ಗುರ್ಜರ್ ಮುಸ್ಲಿಂ ಒಬ್ಬರನ್ನು ಮೇಲ್ಮನೆಗೆ ನಾಮನಿರ್ದೇಶಿತ ಸದಸ್ಯರಾಗಿ ಕಳುಹಿಸಿದಂತಾಗಿದೆ.
ಗುಲಾಮ್ ಅಲಿ ಕಳೆದ 24 ವರ್ಷಗಳಿಂದ ಬಿಜೆಪಿಯೊಂದಿಗೆ ಸಕ್ರಿಯವಾಗಿದ್ದಾರೆ. ಪಕ್ಷದ ಎಸ್‌ಸಿ/ಎಸ್‌ಟಿ ವಿಭಾಗದಲ್ಲಿ ವಕ್ತಾರರಾಗಿಯೂ ಕೆಲಸ ನಿರ್ವಹಿಸುತ್ತಿದ್ದಾರೆ.
ನಾಮನಿರ್ದೇಶನದ ನಂತರ ಮಾತನಾಡಿದ ಗುಲಾಂ ಅಲಿ ಅವರು, 'ಬಿಜೆಪಿಯಲ್ಲಿ ನಾವು ಸ್ಥಾನಕ್ಕಾಗಿ ಕೆಲಸ ಮಾಡುವುದಿಲ್ಲ. ನಾನು ಪಕ್ಷಕ್ಕಾಗಿ ನಿಸ್ವಾರ್ಥವಾಗಿ ಕೆಲಸ ಮಾಡಿದ್ದೇನೆ. ಪಕ್ಷ ನನ್ನ ನಿಷ್ಠೆ, ಕೆಲಸವನ್ನು ನೋಡಿದೆ' ಎಂದಿದ್ದಾರೆ. 'ನಾವು ಅಧಿಕಾರಕ್ಕೆ ಬಂದಾಗ ರಾಜಕೀಯ ಶಕ್ತಿ ಇಲ್ಲದವರಿಗೆ ಅಧಿಕಾರ ನೀಡುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಅದರಂತೆ ಅವರು ನಡೆದುಕೊಂಡಿದ್ದಾರೆ' ಎಂದು ಗುಲಾಂ ಅಲಿ ತಿಳಿಸಿದರು.