ನವದೆಹಲಿ :ಪೂರ್ವ ಲಡಾಖ್ ನ ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ)ಯಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿದ್ದ ಗೋಗ್ರಾ-ಹಾಟ್‌ಸ್ಪ್ರಿಂಗ್ಸ್ ಪ್ರದೇಶದಿಂದ ಭಾರತ ಮತ್ತು ಚೀನಾ ಸೈನಿಕರ ವಾಪಸಾತಿ ಪ್ರಕ್ರಿಯೆಯ ನಡುವೆಯೇ ನಿವೃತ್ತ ಸೇನಾಧಿಕಾರಿಗಳು ಅದಕ್ಕೆ ಹೆಚ್ಚಿನ ಅರ್ಥ ಕಲ್ಪಿಸಬೇಕಿಲ್ಲ ಎಂದು ಶುಕ್ರವಾರ ಎಚ್ಚರಿಕೆ ನೀಡಿದ್ದಾರೆ.
ಅದು ಸೈನಿಕರ ವಾಪಸಾತಿಯಷ್ಟೇ,ಉದ್ವಿಗ್ನತೆ ಇನ್ನೂ ಶಮನಗೊಂಡಿಲ್ಲ ಎಂದು ಬೆಟ್ಟು ಮಾಡಿರುವ ಅವರು,ಲಡಾಖ್ನಲ್ಲಿ ಚೀನಾದ ಕ್ರಮದಿಂದ ಉಂಟಾಗಿರುವ ವಿಶ್ವಾಸದ ಕೊರತೆಯು ತುಂಬಲು ವರ್ಷಗಳೇ ಬೇಕಾಗುತ್ತವೆ ಎಂದು ಹೇಳಿದ್ದಾರೆ.
ಸೇನೆ ವಾಪಸಾತಿ ಕ್ರಮದಲ್ಲಿ ಭೌಗೋಳಿಕ ರಾಜಕೀಯದ ಅಂಶದ ಜೊತೆಗೆ ಮುಂಬರುವ ಶಾಂಘೈ ಸಹಕಾರ ಸಂಘಟನೆ (ಎಸ್ಸಿಒ)ಯ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರ ನಡುವೆ ಭೇಟಿಗೆ ಪೂರಕ ವಾತಾವರಣವನ್ನು ಸೃಷ್ಟಿಸುವ ಪ್ರಯತ್ನವನ್ನೂ ಅವರು ಕಂಡಿದ್ದಾರೆ.
ಗುರುವಾರ ಬೆಳಿಗ್ಗೆ 8:30ಕ್ಕೆ ಸೇನೆ ವಾಪಸಾತಿ ಪ್ರಕ್ರಿಯೆ ಆರಂಭಗೊಂಡಿದ್ದು ಸೋಮವಾರ ಪೂರ್ಣಗೊಳ್ಳಲಿದೆ. 'ಒಪ್ಪಂದದಂತೆ ಸೇನೆ ವಾಪಸಾತಿ ನಡೆದಿದೆ ಎಂದು ನಾವು ಭಾವಿಸಬೇಕಾಗಿಲ್ಲ, ಪಡೆಗಳು ಇನ್ನೂ ಪ್ರದೇಶದಲ್ಲಿ ಉಳಿದಿರುವುದರಿಂದ ಹೆಚ್ಚೆಂದರೆ ಅರ್ಧದಷ್ಟು ಪ್ರಕ್ರಿಯೆ ಪೂರ್ಣಗೊಂಡಿದೆ ' ಎಂದು ಬಲ್ಲ ಮೂಲಗಳು ತಿಳಿಸಿದವು.
ಮುಖಾಮುಖಿ ಸ್ಥಾನಗಳಿಂದ ಸೈನಿಕರು ಮತ್ತು ಉಪಕರಣಗಳನ್ನು ಹಿಂದೆಗೆದುಕೊಳ್ಳಲಾಗುತ್ತಿದೆ, ಆದರೆ ಪ್ಯಾಂಗಾಂಗ್ ತ್ಸೋದಲ್ಲಿ ಮಾಡಿದ್ದಂತೆ ಎಲ್‌ಎಸಿಯಿಂದ ಪರಸ್ಪರ ಸಹಮತದ ಸುರಕ್ಷಿತ ಅಂತರದಲ್ಲಿ ಅವುಗಳನ್ನು ಸ್ಥಿತಗೊಳಿಸಲಾಗುತ್ತದೆ. ಇದು ಉದ್ವಿಗ್ನತೆ ಶಮನವಲ್ಲ ಎಂದು ಹೇಳಿದ ಮೂಲಗಳು, ಆದಾಗ್ಯೂ ಸೇನೆ ವಾಪಸಾತಿಯು ಒಳ್ಳೆಯದು,ಏಕೆಂದರೆ ಅದು ಘರ್ಷಣೆಗಳ ಸಾಧ್ಯತೆಯನ್ನು ತಗ್ಗಿಸುತ್ತದೆ ಎಂದು ತಿಳಿಸಿದವು.
'ಎಸ್‌ಒಸಿ ಶೃಂಗಸಭೆಯು ಸುಗಮವಾಗಿ ನಡೆಯಲು ಪೂರಕ ವಾತಾವರಣವನ್ನು ಸೃಷ್ಟಿಸುವುದು ಸೇನೆ ವಾಪಸಾತಿ ಕ್ರಮದ ಉದ್ದೇಶವಾಗಿದೆ. ಇದಕ್ಕೆ ನಾವು ಹೆಚ್ಚಿನ ಅರ್ಥ ಕಲ್ಪಿಸಬೇಕಿಲ್ಲ' ಎಂದು ರಕ್ಷಣಾ ವಿಶ್ಲೇಷಕ ಮೇ.ಜ.(ನಿವೃತ್ತ) ಎಸ್.ಬಿ.ಅಸ್ಥಾನಾ ಹೇಳಿದರು.
ಮೋದಿ-ಜಿನ್ಪಿಂಗ್ ನಡುವೆ ದ್ವಿಪಕ್ಷೀಯ ಮಾತುಕತೆಯ ಬಗ್ಗೆ ಅಧಿಕೃತ ಮಾಹಿತಿ ಈವರೆಗೂ ಹೊರಬಿದ್ದಿಲ್ಲ. ಬಿಕ್ಕಟ್ಟು ಬಗೆಹರಿಯುವ ಮುನ್ನ ಸಂಬಂಧಗಳನ್ನು ಸಾಮಾನ್ಯಗೊಳಿಸಲು ನಿರಾಕರಿಸುವ ಮೂಲಕ ಭಾರತವು ಸಾಕಷ್ಟು ದೃಢತೆಯನ್ನು ಪ್ರದರ್ಶಿಸಿದೆ ಎಂದು ಹೇಳಿದ ಅಸ್ಥಾನಾ,ಏಶ್ಯಾದ ದೇಶಗಳು ಪರಸ್ಪರ ಚೆನ್ನಾಗಿವೆ ಎಂದು ತೋರಿಸಲು ಚೀನಾ ಬಯಸುತ್ತಿದೆ. ಪರಿಸ್ಥಿತಿ ಉಲ್ಬಣಗೊಳ್ಳಬಹುದು ಎಂಬ ಭಾವನೆಗೆ ಅವಕಾಶ ನೀಡಲು ಅದು ಬಯಸುತ್ತಿಲ್ಲ ಎಂದರು.
ಹಳೆಯ ವಿಶ್ವಾಸ ನಿರ್ಮಾಣ ಕ್ರಮಗಳು ಉಲ್ಲಂಘನೆಗೊಂಡಿವೆ ಮತ್ತು ವಿಶ್ವಾಸವನ್ನು ಮರುನಿರ್ಮಿಸಲು ಅವುಗಳನ್ನು ಪುನರ್ಪರಿಶೀಲಿಸುವ ಅಗತ್ಯವಿದೆ. ಮತ್ತೊಮ್ಮೆ ಅಪಾಯವನ್ನು ಎದುರು ಹಾಕಿಕೊಳ್ಳುವ ಅವಕಾಶವನ್ನು ಯಾರೂ ತೆಗೆದುಕೊಳ್ಳುವುದಿಲ್ಲ,ಹೀಗಾಗಿ ಪಡೆಗಳ ಸಂಖ್ಯೆ ಕಡಿಮೆಯಾಗುತ್ತದೆ ಎಂದು ತಾನು ಭಾವಿಸಿಲ್ಲ ಎಂದು ಹೇಳಿದ ನಿವೃತ್ತ ಲೆ.ಜ.ಡಿ.ಎಸ್.ಹೂಡಾ ಅವರು,ಆರ್ಥಿಕ ಮತ್ತು ಡಿಜಿಟಲ್ ಕ್ಷೇತ್ರಗಳಲ್ಲಿ ಪ್ರಾಬಲ್ಯ ಸಾಧಿಸುವ ಚೀನಾದ ತಂತ್ರದ ಬಗ್ಗೆ ಎಚ್ಚರಿಕೆ ನೀಡಿದರು.
ಭೂ ಅತಿಕ್ರಮಣ ಕಣ್ಣಿಗೆ ಕಾಣುತ್ತದೆ,ಆದರೆ ಆರ್ಥಿಕ ಮತ್ತು ಡಿಜಿಟಲ್ ಆಕ್ರಮಣವನ್ನು ಪ್ರಶ್ನಿಸಲಾಗುತ್ತಿಲ್ಲ ಮತ್ತು ಅವು ಹೆಚ್ಚು ಅಪಾಯಕಾರಿಯಾಗಿವೆ. ಅಲ್ಲಿಯೂ ಅವರು ಹೆಚ್ಚಿನ ಅತಿಕ್ರಮಣದ ತಂತ್ರವನ್ನು ಅನುಸರಿಸುತ್ತಿದ್ದಾರೆ ಎಂದರು. ಭಾರತವನ್ನು ಅಮೆರಿಕದ ತೆಕ್ಕೆಗೆ ತಳ್ಳಲು ಚೀನಾ ಬಯಸುವುದಿಲ್ಲ ಎಂದು ನಿವೃತ್ತ ಲೆ.ಜ.ಪಿಜೆಎಸ್ ಪನ್ನು ಹೇಳಿದರು.