ಸಂವಿಧಾನ ಮತ್ತು ಪ್ರಜಾಪ್ರಭುತ್ವ ರಕ್ಷಿಸಲು ಜೆಡಿಯು(JDU), ಅಕಾಲಿ ದಳ(Akali Dal) ಮತ್ತು ಶಿವಸೇನೆ(Shiv Sena), ಬಿಜೆಪಿ(BJP) ನೇತೃತ್ವದ ಎನ್ಡಿಎ(NDA)ದಿಂದ ಹೊರಬಂದಿದೆ ಎಂದು ಆರ್ ಜೆ ಡಿ(RJD) ನಾಯಕ ಮತ್ತು ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್(Tejashwi Yadav) ಹೇಳಿದ್ದಾರೆ.
ರವಿವಾರ ಮಾಜಿ ಉಪಪ್ರಧಾನಿ ದೇವಿ ಲಾಲ್ ಅವರ ಜನ್ಮ ದಿನದ ಅಂಗವಾಗಿ ಐಎನ್‌ಎಲ್‌ಡಿ ಏರ್ಪಡಿಸಿದ್ದ ರ್ಯಾಲಿಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ನಗರದಲ್ಲಿ ವಿಮಾನ ನಿಲ್ದಾಣವಿಲ್ಲದಿದ್ದರೂ ಗೃಹ ಸಚಿವ ಅಮಿತ್ ಶಾ ಅವರು ಬಿಹಾರದ ಪುರ್ನಿಯಾದಲ್ಲಿ ತಮ್ಮ ಇತ್ತೀಚಿನ ಸಾರ್ವಜನಿಕ ಸಭೆಯಲ್ಲಿ ವಿಮಾನ ನಿಲ್ದಾಣದ ಬಗ್ಗೆ ಮಾತನಾಡಿದ್ದರು ಎಂದು ತೇಜಸ್ವಿ ಹೇಳಿದ್ದಾರೆ.
ನಂತರ ಮಾತಾಡಿದ ಬಿಹಾರ ಸಿಎಂ ನಿತೀಶ್ ಕುಮಾರ್, ಬಿಜೆಪಿಯನ್ನು ಎದುರಿಸಲು ಕಾಂಗ್ರೆಸ್ ಮತ್ತು ಎಡಪಕ್ಷಗಳು ಸೇರಿದಂತೆ ಎಲ್ಲಾ ವಿರೋಧ ಪಕ್ಷಗಳನ್ನು ಒಗ್ಗೂಡಿಸಬೇಕು ಎಂದು ಕರೆ ನೀಡಿದರು.
ಬಿಜೆಪಿಯೇತರ ಪಕ್ಷಗಳೆಲ್ಲ ಒಗ್ಗೂಡಿದರೆ, ದೇಶವನ್ನು ನಾಶ ಮಾಡುತ್ತಿರುವವರನ್ನು ಕಿತ್ತೊಗೆಯಬಹುದು ಎಂದ ನಿತೀಶ್ ಕುಮಾರ್, ಹಿಂದೂ-ಮುಸ್ಲಿಮರ ನಡುವೆ ಯಾವುದೇ ಜಗಳವಿಲ್ಲ, ಬಿಜೆಪಿ ಗಲಭೆ ಸೃಷ್ಟಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದರು.
2024 ರ ಲೋಕಸಭಾ ಚುನಾವಣೆಗೆ ತೃತೀಯ ರಂಗದ ಶಕ್ತಿ ಪ್ರದರ್ಶನಕ್ಕೆ ಹರ್ಯಾಣದ ಇಂಡಿಯನ್ ನ್ಯಾಷನಲ್ ಲೋಕ್ ದಳ್ ಪಕ್ಷವು ತಮ್ಮ ದೇವಿ ಲಾಲ್ ಸಮನ್ ರ್ಯಾಲಿಗೆ ವಿರೋಧ ಪಕ್ಷದ ನಾಯಕರನ್ನು ಆಹ್ವಾನಿದೆ. ನಿತೀಶ್ ಕುಮಾರ್, ಶರದ್ ಪವಾರ್, ಕೆಸಿ ತ್ಯಾಗಿ, ಸುಖಬೀರ್ ಸಿಂಗ್ ಬಾದಲ್, ಸೀತಾರಾಮ್ ಯೆಚೂರಿ, ತೇಜಸ್ವಿ ಯಾದವ್, ಎನ್‌ಸಿ ನಾಯಕ ಫಾರೂಕ್ ಅಬ್ದುಲ್ಲಾ ಮತ್ತು ಶಿವಸೇನೆಯ ಅರವಿಂದ್ ಸಾವಂತ್ ಸೇರಿದಂತೆ ಪ್ರತಿಪಕ್ಷಗಳ ಉನ್ನತ ನಾಯಕರು ಈ ರ್ಯಾಲಿಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
2024ರ ಲೋಕಸಭೆ ಚುನಾವಣೆಗೆ ಆಡಳಿತಾರೂಢ ಬಿಜೆಪಿ ವಿರುದ್ಧ ಸಮಾನ ಮನಸ್ಕ ಶಕ್ತಿಗಳ ಬಲವರ್ಧನೆಯನ್ನು ತೋರಿಸುವ ಐತಿಹಾಸಿಕ ಸಭೆ ಇದಾಗಿದೆ ಎಂದು ಜೆಡಿಯು ನಾಯಕ ಕೆಸಿ ತ್ಯಾಗಿ ಹೇಳಿದ್ದಾರೆ.