ಕಾಸರಗೋಡು: ಅತಿರೇಕದಿಂದ ವರ್ತಿಸುವ ಬೀದಿನಾಯಿಗಳನ್ನು ಸೆರೆಹಿಡಿದು ಲಸಿಕೆ ಹಾಕಲು ಮೊದಲ ಆದ್ಯತೆ ನೀಡಲಾಗುತ್ತಿದ್ದು, ಸೆ.26ರಿಂದ ಅಕ್ಟೋಬರ್ 25ರವರೆಗೆ ಒಂದು ತಿಂಗಳ ಅವಧಿಗೆ ಜಿಲ್ಲೆಯ ಎಲ್ಲ ಸಾಕು ನಾಯಿಗಳಿಗೆ ಲಸಿಕೆ ಹಾಕಿಸಿ ಪರವಾನಗಿ ನೀಡಲು ಪಶು ಸಂಗೋಪನಾ ಇಲಾಖೆ ಯೋಜನೆ ರೂಪಿಸಿದೆ. ಅಕ್ಟೋಬರ್ 26 ರಿಂದ30ರವರೆಗೆ ಬೀದಿ ನಾಯಿಗಳಿಗೂ ಲಸಿಕೆ ಹಾಕಲಾಗುವುದು. ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್ ಚಂದ್, ಸಹಾಯಕ ಜಿಲ್ಲಾಧಿಕಾರಿ ಮಿಥುನ್ ಪ್ರೇಮರಾಜ್ ಅವರ ಸಮ್ಮುಖದಲ್ಲಿ ನ.1ರಂದು ಲಸಿಕೆ ಹಾಕುವ ಕುರಿತು ಪರಿಶೀಲನೆ ನಡೆಸಲು ತೀರ್ಮಾನಿಸಲಾಯಿತು. ಸ್ಥಳೀಯಾಡಳಿತ ಸಂಸ್ಥೆಗಳ ಮೇಲುಸ್ತುವಾರಿಯಲ್ಲಿ ಮುನ್ನೆಚ್ಚರಿಕೆ ಕ್ರಿಯಾ ಯೋಜನೆ ಸಿದ್ಧಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಮೃಗಸಂರಕ್ಷಣಾಧಿಕಾರಿ ಬಿ.ಸುರೇಶ್ ತಿಳಿಸಿದ್ದಾರೆ.
ಬೀದಿ ನಾಯಿಗಳಿಗೆ ಆಶ್ರಯ ಮನೆ:
ಜಿಲ್ಲೆಯಲ್ಲಿ ಬೀದಿನಾಯಿಗಳಿಗೆ ಹೆಚ್ಚಿನ ತಾತ್ಕಾಲಿಕ ರಕ್ಷಣಾ ಕೇಂದ್ರಗಳನ್ನು (ಆಶ್ರಯ ಮನೆ) ತೆರೆಯಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪಿ. ಬೇಬಿ ಬಾಲಕೃಷ್ಣನ್ ಮಾಹಿತಿ ನೀಡಿದರು. ಕಾಞಂಗಾಡು ಮತ್ತು ಪರಪ್ಪ ಬ್ಲಾಕ್‍ಗಳಲ್ಲಿ ಹಾಗೂ ಕುಂಬಳೆಯಲ್ಲಿ ಕೇಂದ್ರಗಳನ್ನು ತೆರೆಯಲು ನಿರ್ಧರಿಸಲಾಗಿದೆ. ಮುಳಿಯಾರ್ ಪಂಚಾಯತ್ ಪಶು ವೈದ್ಯಕೀಯ ಆಸ್ಪತ್ರೆಯ ಸನಿಹದ ಮೃಗಸಂರಕ್ಷಣಾ ಇಲಾಖೆಯ ಆವರಣದಲ್ಲಿಯೂ ಶೆಲ್ಟರ್ ತೆರೆಯಲಾಗುವುದು. ಪ್ರಸಕ್ತ ಕಾಸರಗೋಡು ಮತ್ತು ನೀಲೇಶ್ವರ ಕೊಯೊಂಕಾರದಲ್ಲಿ ಸಂರಕ್ಷಣಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಹಾಟ್‍ಸ್ಪಾಟ್‍ಗಳು, ನಗರ ಪ್ರದೇಶಗಳು ಮತ್ತು ಬ್ಲಾಕ್ ಪಂಚಾಯಿತಿಗಳಲ್ಲಿ ಆಶ್ರಯ ಮನೆಗಳನ್ನು ಪ್ರಾರಂಭಿಸಲು ಸ್ಥಳೀಯಾಡಳಿತ ಇಲಾಖೆ ಅನುಮತಿ ನೀಡಿತ್ತು. ಇದಕ್ಕಾಗಿ ಸ್ಥಳೀಯ ಸಂಸ್ಥೆಗಳು ತಮ್ಮ ಸ್ವಂತ ನಿಧಿಯಿಂದ ಮೊತ್ತವನ್ನು ಬಳಸಿಕೊಳ್ಳಬಹುದಾಗಿದೆ. ಸ್ಥಳೀಯ ಸಂಸ್ಥೆಗಳನ್ನು ಹೊರತುಪಡಿಸಿ ಇಲಾಖೆಗಳ ಅಧೀನದಲ್ಲಿರುವ ಖಾಲಿ ಕಟ್ಟಡಗಳು ಅಥವಾ ಕಟ್ಟಡಗಳ ಭಾಗಗಳನ್ನು ತಾತ್ಕಾಲಿಕ ಆಶ್ರಯ ಮನೆಗಳನ್ನಾಗಿ ಮಾಡಲು ನಿರ್ಧರಿಸಲಾಗಿದೆ. ಶಾಶ್ವತ ಕಟ್ಟಡಗಳು ಸಿಗುವವರೆಗೆ ಈ ಸೌಲಭ್ಯವನ್ನು ಬಳಸಬಹುದು. ಆಶ್ರಯ ಮನೆಗಳ ಸ್ವಾಧೀನಕ್ಕೆ ಆಕ್ಷೇಪವಿದ್ದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆಯಡಿ ಅರ್ಜಿ ಸಲ್ಲಿಸುವಂತೆಯೂ ಆದೇಶ ಹೊರಡಿಸಲಾಗಿದೆ.
ರೇಬೀಸ್ ಬಗ್ಗೆ ಎಚ್ಚರಿಕೆಗೆ ಸೂಚನೆ:
ಹುಚ್ಚುನಾಯಿ ರೋಗದ ಬಗ್ಗೆ ನಾವು ಜಾಗರೂಕರಾಗಿರಬೇಕು ಮತ್ತು ರೇಬೀಸ್ ವಿರುದ್ಧ ನಮ್ಮ ರಕ್ಷಣೆಯನ್ನು ಬಲಪಡಿಸಬೇಕು. ನಾಯಿ ಕಡಿತಕ್ಕೆ ಎಷ್ಟೇ ಸಣ್ಣ ಗಾಯವಾದರೂ ಲಘುವಾಗಿ ಪರಿಗಣಿಸದೆ ಶೀಘ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು ಎಂಬುದಾಗಿ ಇಲಾಖೆ ಅಧಿಖಾರಿಗಳು ತಿಳಿಸಿದ್ದಾರೆ.
*ಗಾಯ ಎಷ್ಟೇ ಚಿಕ್ಕದಾಗಿದ್ದರೂ ಪ್ರಾಣಿಗಳ ಕಡಿತವನ್ನು ನಿರ್ಲಕ್ಷಿಸಬೇಡಿ
* ಪ್ರಥಮ ಚಿಕಿತ್ಸೆ ಮತ್ತು ಲಸಿಕೆಗಳು ಬಹಳ ಮುಖ್ಯ
* ಕಚ್ಚಿದ ಜಾಗವನ್ನು ಆದಷ್ಟು ಬೇಗ ಸೋಪು ಮತ್ತು ನೀರಿನಿಂದ ತೊಳೆಯಿರಿ
* ಆದಷ್ಟು ಬೇಗ ಆಸ್ಪತ್ರೆಗೆ ಹೋಗಿ ಲಸಿಕೆ ಹಾಕಿಸಿಕೊಳ್ಳಿ
* ಆಂಟಿ ರೇಬೀಸ್ ಲಸಿಕೆ (Iಆಖಗಿ) ಮತ್ತು ಇಮ್ಯುನೊಗ್ಲಾಬ್ಯುಲಿನ್ ಅನ್ನು ಗಾಯದ ತೀವ್ರತೆಗೆ ಅನುಗುಣವಾಗಿ ನೀಡಲಾಗುತ್ತದೆ.
* ಸರಿಯಾದ ಮಧ್ಯಂತರದಲ್ಲಿ ಲಸಿಕೆಯನ್ನು ತೆಗೆದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಿ
* ಲಸಿಕೆಯನ್ನು ಕಚ್ಚಿದ ದಿನ ಮತ್ತು ನಂತರ 3, 7 ಮತ್ತು 28 ದಿನಗಳಲ್ಲಿ ನೀಡಬೇಕು.
* ಲಸಿಕೆ ಹಾಕಿದ ನಂತರ ರೋಗಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣ ಚಿಕಿತ್ಸೆ ಪಡೆಯಿರಿ*
* ಸಾಕು ನಾಯಿಗಳಿಗೆ ಲಸಿಕೆ ಹಾಕುವುದನ್ನು ಖಚಿತಪಡಿಸಿಕೊಳ್ಳಿ
* ಸಾರ್ವಜನಿಕ ಸ್ಥಳಗಳಲ್ಲಿ ಮೀನು ಮತ್ತು ಮಾಂಸದಂತಹ ಆಹಾರ ತ್ಯಾಜ್ಯ ಎಸೆಯಬೇಡಿ
* ಪ್ರಥಮ ಚಿಕಿತ್ಸೆ ಮತ್ತು ವ್ಯಾಕ್ಸಿನೇಷನ್ ರೇಬೀಸ್ ವಿರುದ್ಧದ ಅತ್ಯಂತ ದೊಡ್ಡ ರಕ್ಷಣೆಯಾಗಿದೆ. ಆದ್ದರಿಂದ ನಿರ್ಲಕ್ಷಿಸಬೇಡಿ.
ಬೀದಿನಾಯಿಗಳಿಗೆ ಲಸಿಕೆ, ಆಶ್ರಯ ಮನೆ-ಜಿಲ್ಲಾ ಪಂಚಾಯಿತಿ ತೀರ್ಮಾನ
0
ಸೆಪ್ಟೆಂಬರ್ 19, 2022
Tags