ಕೊಚ್ಚಿ: ಕಾಂಗ್ರೆಸ್‌ನ 'ಒಬ್ಬ ವ್ಯಕ್ತಿಗೆ ಒಂದು ಹುದ್ದೆ'ಎಂಬ ನಿಯಮವನ್ನು ನಾನು ಬೆಂಬಲಿಸುವುದಾಗಿ ರಾಹುಲ್ ಗಾಂಧಿ ಗುರುವಾರ ಹೇಳಿದ್ದಾರೆ. ರಾಹುಲ್ ಹೇಳಿಕೆಯು ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ಮುಂಚೂಣಿಯಲ್ಲಿರುವ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಗೆ ಹಿನ್ನಡೆಯಾಗಿದೆ.
ಅವರು ಮುಖ್ಯಮಂತ್ರಿ ಹುದ್ದೆಯ ಜೊತೆಗೆ ಅಧ್ಯಕ್ಷ ಗಾದಿ ನಿಭಾಯಿಸುವ ವಿಶ್ವಾಸದಲ್ಲಿದ್ದರು.
"ನಾವು ಉದಯಪುರದಲ್ಲಿ ಈ ಕುರಿತು ನಿರ್ಣಯಿಸಿದ್ದೇವೆ. ಅದನ್ನು ಉಳಿಸಿಕೊಳ್ಳಲಾಗುವುದು ಎಂದು ನಾನು ನಿರೀಕ್ಷಿಸುತ್ತೇನೆ" ಎಂದು ಕೇರಳದಲ್ಲಿ ಭಾರತ್ ಜೋಡೊ ಯಾತ್ರೆಯಲ್ಲಿರುವ ರಾಹುಲ್ ಗಾಂಧಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
71 ವರ್ಷದ ಅಶೋಕ್ ಗೆಹ್ಲೋಟ್ ಅವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಗಾಂಧಿ ಕುಟುಂಬದ ಆಯ್ಕೆ ಎಂದು ನಂಬಲಾಗಿದೆ. ಆದರೆ ಅವರು ರಾಜಸ್ಥಾನದ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಡಲು ಬಯಸುತ್ತಿಲ್ಲ. ತಾನು ಸಿಎಂ ಸ್ಥಾನ ಬಿಟ್ಟುಕೊಟ್ಟರೆ , ತನ್ನ ಪ್ರತಿಸ್ಪರ್ಧಿ ಸಚಿನ್ ಪೈಲಟ್ ಆ ಸ್ಥಾನಕ್ಕೆ ಕೂರಬಹುದು ಎಂಬ ಭಯ ಅವರನ್ನು ಕಾಡುತ್ತಿದೆ ಎನ್ನಲಾಗಿದೆ.
ಕಾಂಗ್ರೆಸ್ ಈ ವರ್ಷದ ಆರಂಭದಲ್ಲಿ ರಾಜಸ್ಥಾನದ ಉದಯಪುರದಲ್ಲಿ ನಡೆದ ಚಿಂತನ ಶಿಬಿರದಲ್ಲಿ "ಒಬ್ಬ ವ್ಯಕ್ತಿ, ಒಂದು ಹುದ್ದೆ" ನಿಯಮವನ್ನು ಅಳವಡಿಸಿಕೊಂಡಿದೆ. ಅಲ್ಲಿ ಮೂರು ದಿನಗಳ ಚಿಂತನ ಶಿಬಿರದಲ್ಲಿ ಆಂತರಿಕ ಸುಧಾರಣೆಗಳು ಹಾಗೂ ಚುನಾವಣೆಗಳ ಕುರಿತು ಚರ್ಚಿಸಲಾಗಿತ್ತು.
ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿದ್ದ ಹಿರಿಯ ಕಾಂಗ್ರೆಸ್ಸಿಗ ಗೆಹ್ಲೋಟ್ ಗೆ ಇಂದು ರಾಹುಲ್ ಗಾಂಧಿ ನೀಡಿರುವ ಹೇಳಿಕೆ ಹಿನ್ನಡೆಯಾಗಿದೆ.
ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ನಾನು ಸೈದ್ಧಾಂತಿಕ ಹುದ್ದೆಯಾಗಿ ನೋಡುತ್ತೇನೆ ಎಂದ ರಾಹುಲ್ " ಕಾಂಗ್ರೆಸ್ ಅಧ್ಯಕ್ಷರಿಗೆ ನನ್ನ ಸಲಹೆ ಏನೆಂದರೆ, ಯಾರು ಮುಖ್ಯಸ್ಥರಾಗುತ್ತಾರೋ ಅವರು ಕಲ್ಪನೆಗಳು, ನಂಬಿಕೆ ವ್ಯವಸ್ಥೆ, ಭಾರತದ ದೃಷ್ಟಿಕೋನವನ್ನು ಪ್ರತಿನಿಧಿಸುತ್ತಾರೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು" ಎಂದು ಹೇಳಿದರು.