ನವದೆಹಲಿ: ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಅವರನ್ನು ಪಾನಮತ್ತರಾಗಿದ್ದಾರೆ ಎಂಬ ಕಾರಣಕ್ಕೆ ವಿಮಾನದಿಂದ ಕೆಳಗಿಳಿಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಅವರು ಪರಿಶೀಲನೆ ನಡೆಸುವುದಾಗಿ ತಿಳಿಸಿದ್ದಾರೆ.
ಸತ್ಯಾಸತ್ಯತೆಗಳನ್ನು ಪರಿಶೀಲಿಸಲು ಇದೊಂದು ಪ್ರಮುಖ ವಿಚಾರವಾಗಿದೆ ಎಂದಿದ್ದಾರೆ.
ಜರ್ಮನಿಯ ಫ್ರಾಂಕ್‌ಫರ್ಟ್ ವಿಮಾನ ನಿಲ್ದಾಣದಲ್ಲಿ ದೆಹಲಿಗೆ ಹೊರಟಿದ್ದ ಲುಫ್ಥಾನ್ಸ ವಿಮಾನದಿಂದ ಕೆಳಗಿಳಿಸಲಾಗಿದೆ ಎಂದು ಆಪಾದಿಸಲಾಗಿದೆ.
'ಫ್ರಾಂಕ್‌ಫರ್ಟ್ ವಿಮಾನ ನಿಲ್ಧಾಣದಲ್ಲಿ ಲುಫ್ಥಾನ್ಸ ವಿಮಾನದಿಂದ ಭಗವಂತ ಮಾನ್ ಅವರನ್ನು ಕೆಳಗಿಳಿಸಲಾಗಿದೆ. ಕಾರಣ ಮಾನ್ ಅವರು ಪಾನಮತ್ತರಾಗಿದ್ದರು' ಎಂದು ಶಿರೋಮಣಿ ಅಕಾಲಿ ದಳ (ಎಸ್‌ಎಡಿ)ದ ಮುಖ್ಯಸ್ಥ ಸುಖ್‌ಬಿರ್ ಸಿಂಗ್ ಬಾದಲ್ ಅವರು ಸೋಮವಾರ ಆಪಾದಿಸಿದ್ದಾರೆ.
ಮಾನ್ ಅವರನ್ನು ವಿಮಾನದಿಂದ ಕೆಳಗಿಳಿಸಿದ ಘಟನೆಗೆ ಸಂಬಧಿಸಿ ಪರಿಶೀಲಿಸುವಂತೆ ಜ್ಯೋತಿರಾಧಿತ್ಯ ಸಿಂಧಿಯಾ ಅವರಿಗೆ ಕಾಂಗ್ರೆಸ್ ನಾಯಕ ಪ್ರತಾಪ್ ಸಿಂಗ್ ಬಾಜ್ವಾ ಪತ್ರ ಬರೆದಿದ್ದಾರೆ.
ಈ ಘಟನೆಯು ವಿದೇಶದಲ್ಲಿ ನಡೆದುದ್ದಾಗಿದೆ. ಸತ್ಯಾಸತ್ಯತೆಗಳನ್ನು ಪರಿಶೀಲಿಸಬೇಕಿದೆ. ಲುಫ್ಥಾನ್ಸ ವಿಮಾನಯಾನಕ್ಕೆ ವಿವರಗಳನ್ನು ನೀಡುವಂತೆ ವಿನಂತಿಸಲಾಗಿದೆ. ಅವರ ಕೊಟ್ಟ ವರದಿಯನ್ನು ಆಧರಿಸಿ ಮುಂದಿನ ಕ್ರಮಗಳ ಕುರಿತು ಆಲೋಚಿಸಬಹುದಾಗಿದೆ ಎಂದು ಸಿಂಧಿಯಾ ಅವರು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದಾರೆ.
ಮಾನ್ ಅವರು 8 ದಿನಗಳ ಜರ್ಮನಿ ಪ್ರವಾಸದ ಬಳಿಕ ಸೋಮವಾರ ಪಂಜಾಬ್‌ಗೆ ಹಿಂತಿರುಗಿದ್ದಾರೆ.