ಮುಂಬೈ: ಟಿಆರ್‌ಪಿ (TRP) ರೇಟಿಂಗ್‍ಗಳನ್ನು ತಿರುಚಿದ ಆರೋಪ ಪ್ರಕರಣದಲ್ಲಿ ರಿಪಬ್ಲಿಕ್ ಟಿವಿ (Republic TV) ವಾಹಿನಿಯ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳು ದೊರಕಿಲ್ಲ ಎಂದು ಮುಂಬೈಯಲ್ಲಿನ ವಿಶೇಷ ನ್ಯಾಯಾಲಯದ ಮುಂದೆ ಸಲ್ಲಿಸಲಾದ ಚಾರ್ಜ್‍ಶೀಟ್‍ನಲ್ಲಿ ಜಾರಿ ನಿರ್ದೇಶನಾಲಯ (ED) ಹೇಳಿದೆ.
ಈ ಪ್ರಕರಣವನ್ನು ಮೊದಲು ಮುಂಬೈ ಪೊಲೀಸರು ದಾಖಲಿಸಿದ್ದರೂ ನಂತರ ಜಾರಿ ನಿರ್ದೇಶನಾಲಯ ಪ್ರತ್ಯೇಕ ಪ್ರಕರಣ ದಾಖಲಿಸಿತ್ತು. ಸೆಪ್ಟೆಂಬರ್ 15 ರಂದು ಚಾರ್ಜ್‍ಶೀಟ್ ಸಲ್ಲಿಕೆಯಾಗಿದ್ದು ಬುಧವಾರ ಇದನ್ನು ವಿಶೇಷ ನ್ಯಾಯಾಧೀಶ ಎಂ ಜಿ ದೇಶಪಾಂಡೆ ಪರಿಗಣನೆಗೆ ತೆಗೆದುಕೊಂಡಿದ್ದಾರೆ.
ತಾನು ಈ ಪ್ರಕರಣದಲ್ಲಿ ನಡೆಸಿದ ತನಿಖೆಗೂ ಮುಂಬೈ ಪೊಲೀಸರ ತನಿಖೆಯೂ ತಾಳೆಯಾಗುತ್ತಿಲ್ಲ ಎಂದು ಚಾರ್ಜ್‍ಶೀಟ್‍ನಲ್ಲಿ ಜಾರಿ ನಿರ್ದೇಶನಾಲಯ ಹೇಳಿದೆಯಲ್ಲದೆ ಟಿಆರ್‌ಪಿ ತಿರುಚಿದ ಪ್ರಕರಣದಲ್ಲಿ ರಿಪಬ್ಲಿಕ್ ಟಿವಿ ಮತ್ತು ಅದರ ಹಿಂದಿ ಚಾನೆಲ್ ರಿಪಬ್ಲಿಕ್ ಭಾರತ್ ವಿರುದ್ಧದ ಆರೋಪಗಳಿಗೆ ಪುರಾವೆ ದೊರಕಿಲ್ಲ ಎಂದು ಹೇಳಿದೆ. ಎರಡು ಇತರ ವಾಹಿನಿಗಳಾದ ನ್ಯೂಸ್ ನೇಷನ್ ಮತ್ತು ಇಂಡಿಯಾ ಟುಡೇ ಪಾತ್ರಗಳ ಕುರಿತಂತೆ ತನಿಖೆ ಪೂರ್ಣಗೊಂಡಿಲ್ಲ ಎಂದೂ ಜಾರಿ ನಿರ್ದೇಶನಾಲಯ ತನ್ನ ಚಾರ್ಜ್‍ಶೀಟ್‍ನಲ್ಲಿ ಹೇಳಿದೆ.
ಆದರೆ ಪ್ರಕರಣದಲ್ಲಿ 16 ಆರೋಪಿಗಳನ್ನು ಹೆಸರಿಸಲಾಗಿದ್ದು ಅವರಲ್ಲಿ ಟಿವಿ ವಾಹಿನಿ ಫಕ್ತ್ ಮರಾಠಿ, ಬಾಕ್ಸ್ ಸಿನೆಮಾ ಮತ್ತು ಮಹಾ ಮೂವೀಸ್ ಇದರ ನಿರ್ದೇಶಕರೂ ಇದ್ದಾರೆ. ಮಾರ್ಕೆಟ್ ರಿಸರ್ಚ್ ಏಜನ್ಸಿ ಹನ್ಸಾ ರಿಸರ್ಚ್ ಗ್ರೂಪ್ ಇದರ ರಿಲೇಷನ್‍ಶಿಪ್ ಮ್ಯಾನೇಜರ್ ಮತ್ತು ಬ್ರಾಡ್‍ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ ಇದರ ಗುತ್ತಿಗೆದಾರನ ಹೆಸರೂ ಉಲ್ಲೇಖಗೊಂಡಿದೆ.