ಕೊಚ್ಚಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯ(ಪಿಎಫ್‍ಐ)ದ ಕೇರಳದ ಕಚೇರಿ ಮತ್ತು ಮುಖಂಡರ ಮನೆಗಳು ಸೇರಿದಂತೆ 50ಕೇಂದ್ರಗಳಲ್ಲಿ ಎನ್‍ಐಎ ಹಾಗೂ ಇ.ಡಿ ನಡೆಸಿದ ದಾಳಿ ಅತ್ಯಂತ ಗೌಪ್ಯ ಹಾಗೂ ಯೋಜನಾಬದ್ಧವಾಗಿತ್ತು. ಎನ್‍ಐಎ, ಇ.ಡಿಯ ನಾಲ್ಕು ಅಧಿಕಾರಿಗಳನ್ನೊಳಗೊಂಡ ಒಂದು ತಂಡವನ್ನು ರಚಿಸಲಾಗಿದ್ದು, ಇವರ ಸುರಕ್ಷತೆಗಾಗಿ 50ಮಂದಿ ಸಿಆರ್‍ಪಿಎಫ್ ಹಾಗೂ ಕೇಂದ್ರ ಸೇನಾ ಪಡೆ ಯೋಧರನ್ನು ಕಳುಹಿಸಲಾಗಿದೆ.
ಕಾರ್ಯಾಚರಣೆಗಾಗಿ ಸಜ್ಜುಗೊಳಿಸಲಾದ ಸಿಆರ್‍ಪಿಎಫ್ ಹಾಗೂ ಕೇಂದ್ರ ಗಡಿರಕ್ಷಣಾ ಪಡೆಯ ಯೋಧರನ್ನು ಐಎಲ್-76 ಬೃಹತ್ ಗಾತ್ರದ ವಿಮಾನದ ಮೂಲಕ ಕರಿಪ್ಪೂರ್ ವಿಮಾನ ನಿಲ್ದಾಣಕ್ಕೆ ಕರೆತರಲಾಗಿತ್ತು.
ದೇಶದಲ್ಲಿ ಎನ್‍ಐಎ ನಡೆಸಿರುವ ಅತಿ ದೊಡ್ಡ ಕಾರ್ಯಾಚರಣೆ ಇದಾಗಿದ್ದು, ಪ್ರತಿ ತಂಡಕ್ಕೆ ಯಾವ ರೀತಿ ದಾಳಿ ನಡೆಸಬೇಕು, ಯಾವೆಲ್ಲ ದಾಖಲೆ ಕಲೆ ಹಾಕಬೇಕೆಂಬ ಬಗ್ಗೆ ಪ್ರತ್ಯೇಕ ಮಾಹಿತಿಯನ್ನೂ ನೀಡಲಾಗಿತ್ತು. ಎನ್‍ಐಎ ದ. ಭಾರತದ ಜವಾಬ್ದಾರಿ ಹೊಂದಿರುವ ಕೊಚ್ಚಿ ಐ.ಜಿ ಸಂತೋಷ್ ರಸ್ತೋಗಿ ಕಾರ್ಯಾಚರಣೆ ನೇತೃತ್ವ ವಹಿಸಿದ್ದರು. ಡಿಐಜಿಗಳಾದ ಕಳಕಾಡ್ ಮಹೇಶ್, ಕೆ.ವಿ ವಂದನಾ, ಆಶಿಶ್ ಚೌದುರಿ ಹಾಗೂ ಇತರ ಐವರು ಎಸ್‍ಪಿಗಳು ಸಹಕರಿಸಿದ್ದರು.
ಕಾರ್ಯಾಚರಣೆಗಾಗಿ ಭಾನುವಾರವೇ ಕೇರಳಕ್ಕೆ ಎನ್‍ಐಎ ತಂಡ ಬಂದಿತ್ತು. ಹೋಟೆಲ್ ಒಂದರಲ್ಲಿ ದಾಳಿಯ ರೂಪುರೇಶೆ ತಯಾರಿಸಿದ್ದು, ದಾಳಿ ನಡೆಸಬೇಕಾದ ಮನೆ, ಕಚೇರಿಗಳನ್ನು ಗೊತ್ತುಮಾಡಿಕೊಮಡು, ಗುರುವಾರ ಬೆಳಗ್ಗೆ 2.30ಕ್ಕೆ ತಂಡ ಕಾರ್ಯಾಚರಣೆಗಾಗಿ ಹೋಟೆಲ್‍ನಿಂದ ಹೊರಟಿತ್ತು. ಇಷ್ಟೆಲ್ಲ ಕಾರ್ಯಚರಣೆಗೆ ಯೋಜನೆ ಸಿದ್ಧಪಡಿಸಿದ್ದರೂ, ಕೇರಳ ಪೊಲೀಸರಿಗೆ ಈ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಕೊನೆ ನಿಮಿಷದ ವರೆಗೂ ತಾವು ಕರೆಸಿಕೊಂಡಿದ್ದ ಕೇಂದ್ರ ಸೇನಾ ಯೋಧರಿಗೂ ದಾಳಿಯ ಸ್ವರೂಪದ ಬಗ್ಗೆ ಮಾಹಿತಿಯಿರಲಿಲ್ಲ.
ಗೌಪ್ಯ, ಯೋಜನಾಬದ್ಧ ಕಾರ್ಯಾಚರಣೆ-ಕೇರಳ ಪೊಲೀಸರಿಗೆ ಮಾಹಿತಿಯೇ ಇದ್ದಿರಲಿಲ್ಲ
0
ಸೆಪ್ಟೆಂಬರ್ 23, 2022