ಕಾಸರಗೋಡು: ಕ್ಷೀರಾಭಿವೃದ್ಧಿ ಇಲಾಖೆ ಅಧೀನದಲ್ಲಿ ಓಣಂ ಸಂದರ್ಭ ಹಾಲಿನ ಗುಣಮಟ್ಟದ ಪರೀಕ್ಷೆ ಮತ್ತು ಮಾಹಿತಿ ಕೇಂದ್ರವನ್ನು ಸೆಪ್ಟಂಬರ್ 3 ರಿಂದ 7 ರವರೆಗೆ ನಡೆಸಲಾಗುತ್ತದೆ. ಓಣಂ ಸಂದರ್ಭದಲ್ಲಿ ಜಿಲ್ಲೆಯ ಮಾರುಕಟ್ಟೆಗಳಿಗೆ ಬರುವ ಹಾಲಿನ ಮಾದರಿಗಳನ್ನು ಜಿಲ್ಲಾ ಪ್ರಯೋಗಾಲಯದಲ್ಲಿ ಪರೀಕ್ಷಿಸಲಾಗುವುದು. ಓಣಂ ಕಾಲಾವಧಿಯಲ್ಲಿ ಹೆಚ್ಚಿನ ಪ್ರಮಾಣದ ಹಾಲು ಖರ್ಚಾಗುತ್ತಿದ್ದು, ಇತರ ರಾಜ್ಯ ಹಾಗೂ ಜಿಲ್ಲೆಗಳಿಂದ ಕಾಸರಗೋಡಿಗೆ ಪೂರೈಕೆಯಗುವ ಕೆಲವೊಂದು ಸಂಸ್ಥೆಗಳ ಹಾಲಿನಲ್ಲಿ ಕಲಬೆರಕೆ ಸಾಧ್ಯತೆ ಹಿನ್ನೆಲೆಯಲ್ಲಿ ಈ ತಪಾಸಣೆ ಕೈಗೊಳ್ಳಲಾಗುತ್ತಿದೆ.
ಪ್ರತಿ ಮಾದರಿಯಲ್ಲಿ ಹಾಲಿನ ರಾಸಾಯನಿಕ ಗುಣಮಟ್ಟದ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಹಾಲು ಉತ್ಪಾದಕರು ಹಾಗೂ ಬಳಕೆದಾರರು ಈ ತಪಾಸಣಾ ವಿಧಾನದ ಪ್ರಯೋಜನ ಪಡೆಯಬಹುದಾಗಿದೆ. ತಪಾಸಣೆಯ ವೇಳೆ ಹಾಲು ಕಳಪೆಯಾಗಿರುವುದು ಅಥವಾ ಅಸುರಕ್ಷಿತವಾಗಿರುವುದು ಕಂಡುಬಂದಲ್ಲಿ ಮುಂದಿನ ಕ್ರಮಕ್ಕಾಗಿ ಆಹಾರ ಸುರಕ್ಷತಾ ಇಲಾಖೆಗೆ ವರದಿ ಸಲ್ಲಿಸಲಾಗುವುದು. ಆಸಕ್ತ ಗ್ರಾಹಕರು 200 ಎಂಎಲ್ ಹಾಲನ್ನು ಕಾಸರಗೋಡು ಸಿವಿಲ್ ಸ್ಟೇಷನ್ ನಲ್ಲಿರುವ ಡೈರಿ ಅಭಿವೃದ್ಧಿ ಇಲಾಖೆ ಕಚೇರಿಗೆ ತಲುಪಿಸಬೇಕಾಗಿದೆ. ಈ ಬಗ್ಗೆ ಮಾಹಿತಿಗೆ ದೂರವಾಣಿ ಸಂಖ್ಯೆ(04994 255390)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಇಂದಿನಿಂದ ಜಿಲ್ಲೆಯಲ್ಲಿ ಹಾಲಿನ ಗುಣಮಟ್ಟ ಪರೀಕ್ಷೆ, ಮಾಹಿತಿ ಕೇಂದ್ರ ಆರಂಭ
0
ಸೆಪ್ಟೆಂಬರ್ 03, 2022