ಆರ್ಥಿಕವಾಗಿ ದುರ್ಬಲವಾದ ವರ್ಗ(ಇಡಬ್ಲ್ಯುಎಸ್)ಗಳಿಗೆ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶಾತಿ ಹಾಗೂ ಉದ್ಯೋಗಗಳಲ್ಲಿ ಶೇ.10ರಷ್ಟು ಮೀಸಲಾತಿ ನೀಡುವ ಕೇಂದ್ರ ಸರಕಾರದ ನಿರ್ಧಾರವನ್ನು ಪ್ರಶ್ನಿಸುವ ಅರ್ಜಿಗಳ ಕುರಿತಾದ ತನ್ನ ತೀರ್ಪನ್ನು ಸುಪ್ರೀಂಕೋರ್ಟ್ ಮಂಗಳವಾರ ಕಾದಿರಿಸಿದೆ.
ಸಮಾನತೆಯ ಹಕ್ಕು ಹಾಗೂ ಮೀಸಲಾತಿಯ ತಳಹದಿ ಕುರಿತಾದ ವಿಷಯಗಳಿಗೆ ಸಂಬಂಧಿಸಿದ ಸಂವಿಧಾನದ 15 ಹಾಗೂ 16ನೇ ವಿಧಿಗಳಲ್ಲಿ ಬದಲಾವಣೆ ಮಾಡಿರುವ ಸಂವಿಧಾನದ 103ನೇ ತಿದ್ದುಪಡಿಯನ್ನು ಅರ್ಜಿದಾರರು ವಿರೋಧಿಸಿದ್ದರು.
ಈ ವಿಷಯಕ್ಕೆ ಸಂಬಂಧಿಸಿ ನಡೆದ ವಿಚಾರಣೆಯ ಸಂದರ್ಭ ಅರ್ಜಿದಾರರ ಪರ ನ್ಯಾಯವಾದಿ ಮೋಹನ್ ಗೋಪಾಲ್ ಅವರು ಸಂವಿಧಾನ 103ನೇ ತಿದ್ದುಪಡಿಯು, ಸಂವಿಧಾನಕ್ಕೆ ಎಸಗುವ ವಂಚನೆಯಾಗಿದೆ ಎಂದು ವಾದಿಸಿದ್ದರು.
ಇ.ಡಬ್ಲ್ಯು.ಎಸ್. ಮೀಸಲಾತಿಯನ್ನು ವಿರೋಧಿಸುವ ಅರ್ಜಿದಾರರ ಮತ್ತೊಂದು ಗುಂಪನ್ನು ಪ್ರತಿನಿಧಿಸಿದ ಹಿರಿಯ ನ್ಯಾಯವಾದಿ ಪಿ. ವಿಲ್ಸನ್ ಅವರು ಮೀಸಲಾತಿಯು ಐತಿಹಾಸಿಕವಾಗಿ ಆಗಿರುವಂತಹ ಅನ್ಯಾಯಕ್ಕಾಗಿ ನೀಡು ಉಪಶಮನವೇ ಹೊರತು ಬಡತನ ನಿವಾರಣೆ ಕಾರ್ಯಕ್ರಮವಲ್ಲವೆಂದು ಪ್ರತಿಪಾದಿಸಿದ್ದರು.
ಆರ್ಥಿಕ ದುರ್ಬಲ ವರ್ಗಗಳಿಗೆ ಮೀಸಲಾತಿ ಕೋಟಾವು ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಹಕ್ಕುಗಳನ್ನು ಕಸಿಯುವುದಿಲ್ಲವೆಂದು ಕೇಂದ್ರ ಸರಕಾರ ಸುಪ್ರೀಂಕೋರ್ಟ್‌ಗೆ ಸ್ಪಷ್ಟಪಡಿಸಿದೆ. ಮೀಸಲಾತಿ ನೀತಿಯಡಿ ಪರಿಶಿಷ್ಟ ಜಾತಿ/ಪಂಗಡಗಳು ಸಾಕಷ್ಟು ಸೌಲಭ್ಯಗಳನ್ನು ಅನುಭವಿಸುತ್ತಿವೆಯೆಂದವರು ಸುಪ್ರೀಂಕೋರ್ಟ್ ನ್ಯಾಯಪೀಠಕ್ಕೆ ತಿಳಿಸಿದ್ದರು. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಸಮದಾಯಗಳಿಗೆ ಸಂವಿಧಾನದ 16 (4) (ಎ) (ಭಡ್ತಿಗೆ ವಿಶೇಷ ನಿಯಮ), 243ಡಿ (ಪಂಚಾಯತ್ ಹಾಗೂ ಪುರಸಭೆ ಸ್ಥಾನಗಳಲ್ಲಿ ಮೀಸಲಾತಿ) 330 (ಲೋಕಸಭೆಯಲ್ಲಿ ಮೀಸಲಾತಿ) ಹಾಗೂ 332 ( ರಾಜ್ಯ ವಿಧಾನಸಭಾ ಸ್ಥಾನಗಳಲ್ಲಿ ಮೀಸಲಾತಿ) ವಿಧಿಗಳ ಅಡಿಯಲ್ಲಿ ಹಲವಾರು ಸವಲತ್ತುಗುಳನ್ನು ನೀಡಲಾಗಿದೆ ಎಂದು ಸರಕಾರ ಸುಪ್ರೀಕೋರ್ಟ್‌ಗೆ ವಿವರಿಸಿತ್ತು.