ಸಾರ್ವಜನಿಕ ವಲಯದ ಬ್ಯಾಂಕ್ಗಳಲ್ಲಿ (ಪಿಎಸ್ಯುು) ಕ್ಲರ್ಕ್ (ಗುಮಾಸ್ತ) ಸಿಬ್ಬಂದಿ ನೇಮಕಾತಿಯಲ್ಲಿ ಭಾರಿ ಕುಸಿತವಾಗಿದೆ. ಗ್ರಾಹಕರು ಬ್ಯಾಂಕ್ ಶಾಖೆಗಳಿಗೆ ಭೇಟಿ ನೀಡುವ ಬದಲು ಆನ್ಲೈನ್ ವಹಿವಾಟುಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು, ಎಟಿಎಂಗಳ ಅಧಿಕ ಬಳಕೆ ಹಾಗೂ ದಿನನಿತ್ಯದ ಕಾರ್ಯಗಳಲ್ಲಿ ತಂತ್ರಜ್ಞಾನ ಉಪಯೋಗ ಹೆಚ್ಚುತ್ತಿರುವುದು ಇದಕ್ಕೆ ಕಾರಣ.
ಹೀಗೆಂದು ಭಾರತೀಯ ರಿಸರ್ವ್ ಬ್ಯಾಂಕ್ನ (ಆರ್ಬಿಐ) ವರದಿ ಸ್ಪಷ್ಟವಾಗಿ ಸೂಚಿಸಿದೆ.
ಆರ್ಬಿಐ ಬಿಡುಗಡೆ ಮಾಡಿದ ಇತ್ತೀಚಿನ ಬ್ಯಾಂಕ್ ಉದ್ಯೋಗ ದತ್ತಾಂಶಗಳ ಪ್ರಕಾರ, ಭಾರತದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಕ್ಲರ್ಕ್ ಹುದ್ದೆಗಳ ಪಾಲು 90ರ ದಶಕದಲ್ಲಿ ಶೇ. 50ರಷ್ಟು ಇತ್ತು. ಆದರೆ, ಈ ಸಂಖ್ಯೆ 2021ರಲ್ಲಿ ಶೇ. 22ಕ್ಕೆ ಕುಸಿದಿದೆ. ತಂತ್ರಜ್ಞಾನದ ತ್ವರಿತ ಅಳವಡಿಕೆ ಕ್ಲರಿಕಲ್ ಹುದ್ದೆಗಳ ಅವಲಂಬನೆಯನ್ನು ತಗ್ಗಿಸಿದೆ. ಮೊಬೈಲ್ಫೋನ್ಗಳು ಹಾಗೂ ಅಗ್ಗದ ಡೇಟಾ ಯೋಜನೆಗಳ ಆಗಮನದ ನಂತರ ನಗರ ಪ್ರದೇಶಗಳಲ್ಲಿನ ಶಾಖೆಗಳಲ್ಲಿ ಉದ್ದನೆಯ ಸರತಿ ಸಾಲುಗಳು ಕಡಿಮೆಯಾಗಿವೆ.
ಶಾಖೆ ಏರಿಕೆ, ಸಿಬ್ಬಂದಿ ಕುಸಿತ: 2021ರ ಮಾರ್ಚ್ ಅಂತ್ಯದ ವೇಳೆಗೆ, ಸಾರ್ವಜನಿಕ ವಲಯದ ಬ್ಯಾಂಕ್ಗಳು ದೇಶದಾದ್ಯಂತ 86,311 ಶಾಖೆಗಳನ್ನು ಹಾಗೂ ಸುಮಾರು 1.4 ಲಕ್ಷ ಎಟಿಎಂಗಳನ್ನು ಹೊಂದಿದ್ದವು. ಇದಕ್ಕೂ ಒಂದು ದಶಕದ ಮುಂಚೆ ಶಾಖೆಗಳ ಸಂಖ್ಯೆ 67,466 ಮತ್ತು ಎಟಿಎಂಗಳ ಸಂಖ್ಯೆಯು 58,193 ಇತ್ತು. 2010-11ರಲ್ಲಿ ಒಟ್ಟು ಉದ್ಯೋಗಿಗಳ ಸಂಖ್ಯೆ 7.76 ಲಕ್ಷ ಇದ್ದರೆ, 2020-21ರಲ್ಲಿ ಇದು 7. 71 ಲಕ್ಷಕ್ಕೆ ಇಳಿದಿದೆ ಎಂದು ಆರ್ಬಿಐ ಅಂಕಿಅಂಶಗಳು ಹೇಳುತ್ತವೆ. ಬ್ಯಾಂಕಿಂಗ್ ವಲಯದಲ್ಲಿ ಅಧಿಕಾರಿಗಳ ಸಂಖ್ಯೆಅಂದಾಜು ಶೇ. 26 ಹೆಚ್ಚಿದ್ದರೆ, ಕ್ಲರ್ಕ್ ಮತ್ತು ಅಧೀನ ಸಿಬ್ಬಂದಿ ಸಂಖ್ಯೆಯಲ್ಲಿ ತೀವ್ರ ಕುಸಿತ ಕಂಡುಬಂದಿದೆ. ತಂತ್ರಜ್ಞಾನದ ವ್ಯಾಪಕ ಬಳಕೆ ಮತ್ತು ಈ ಶ್ರೇಣಿಗಳಲ್ಲಿ ನೇಮಕಾತಿಯ ಕೊರತೆಯೇ ಇದಕ್ಕೆ ಕಾರಣವಾಗಿದೆ. ಬ್ಯಾಂಕ್ ಶಾಖೆಗಳಿಗೆ ಭೇಟಿ ನೀಡುವ ಬದಲು ಆನ್ಲೈನ್ ವಹಿವಾಟುಗಳಿಗೆ ಗ್ರಾಹಕರು ಹೆಚ್ಚಿನ ಆದ್ಯತೆ ನೀಡುತ್ತಿರುವುದೇ ಕ್ಲರ್ಕ್ಗಳ ನೇಮಕಾತಿ ಕಡಿಮೆಯಾಗಲು ಪ್ರಮುಖ ಕಾರಣವೆಂದು ಪರಿಗಣಿಸಲಾಗಿದೆ. ಬ್ಯಾಂಕ್ ನೌಕರರ ಸಂಘಗಳು ಗುಮಾಸ್ತರನ್ನು ಕಡೆಗಣಿಸುವುದನ್ನು ವಿರೋಧಿಸುತ್ತಿವೆ. ಈ ಹುದ್ದೆಗಳ ಪಾತ್ರವನ್ನು ಹೆಚ್ಚು ಪ್ರಸ್ತುತಪಡಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕು ಹಾಗೂ ಅಧಿಕಾರವನ್ನು ನವೀಕರಿಸಬೇಕೆಂದು ಅವು ಆಗ್ರಹಿಸುತ್ತಿವೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳಲ್ಲಿನ ಮಾನವ ಸಂಪನ್ಮೂಲ ಸಮಸ್ಯೆಗಳ ಪರಿಶೀಲನೆ ಸಮಿತಿ ಕೂಡ 2010ನೇ ಸಾಲಿನಲ್ಲಿ ನೀಡಿದ ವರದಿಯಲ್ಲಿ ಕ್ಲರಿಕಲ್ ಉದ್ಯೋಗಗಳ ನಿರಂತರ ಅಗತ್ಯವನ್ನು ಪರಿಶೀಲಿಸಬೇಕೆಂದು ಹೇಳಿದೆ.
ತಗ್ಗಿದ ನೇಮಕಾತಿ: ಕ್ಲರಿಕಲ್ ಹುದ್ದೆಯಲ್ಲಿರುವವರು ಸಾಮಾನ್ಯವಾಗಿ ಟೆಲ್ಲರ್ಗಳು, ಕ್ಯಾಷಿಯರ್ಗಳು ಮತ್ತು ಅಧಿಕಾರಿಗಳಿಗೆ ಸಹಾಯಕರು ಆಗಿರುತ್ತಾರೆ. ಅಲ್ಲದೆ, ದಾಖಲೆಗಳನ್ನು ಸಿದ್ಧಪಡಿಸುವ ಕೆಲಸ ಮಾಡುತ್ತಾರೆ. ಅಧಿಕಾರಿಗಳು ಮತ್ತು ಗುಮಾಸ್ತರ ನಡುವಿನ ಪ್ರಾಥಮಿಕ ವ್ಯತ್ಯಾಸವೆಂದರೆ ಸಾಲ ಮತ್ತು ಮುಂಗಡಗಳನ್ನು ಮಂಜೂರು ಮಾಡುವ ಅಧಿಕಾರ ಅಧಿಕಾರಿಗಳಿಗೆ ಇರುತ್ತದೆ. ಈಗ ತಂತ್ರಜ್ಞಾನವು ಈ ಕಾರ್ಯಗಳನ್ನು ನಿರ್ವಹಿಸುತ್ತಿರುವುದರಿಂದ ಬ್ಯಾಂಕುಗಳು ಕ್ಲರಿಕಲ್ ಉದ್ಯೋಗಿಗಳ ನೇಮಕಾತಿಯನ್ನು ಕ್ರಮೇಣವಾಗಿ ಕಡಿತಗೊಳಿಸಿವೆ. ನಗರ ಪ್ರದೇಶಗಳಲ್ಲಿ ಹೆಚ್ಚಿನ ಸಾಂದ್ರತೆ ಹೊಂದಿರುವ ಖಾಸಗಿ ವಲಯದ ಬ್ಯಾಂಕ್ಗಳಿಂತ ಕಡಿಮೆ ಸಿಬ್ಬಂದಿಯನ್ನು ರಾಷ್ಟ್ರೀಕೃತ ಬ್ಯಾಂಕ್ಗಳು ಹೊಂದಿವೆ ಎಂಬುದನ್ನು ಸ್ವತಃ ರಾಷ್ಟ್ರೀಕೃತ ಬ್ಯಾಂಕ್ ಆಡಳಿತಗಾರರೇ ಒಪ್ಪಿಕೊಂಡಿದ್ದಾರೆ. 2021ರ ಮಾರ್ಚ್ಗೆ ಕೊನೆಗೊಂಡ 10 ವರ್ಷಗಳಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್ ಶಾಖೆಗಳ ಸಂಖ್ಯೆ ಶೇ. 28ರಷ್ಟು ಏರಿಕೆಯಾಗಿದೆ. ಆದರೆ, ಇದೇ ವೇಳೆ ಬ್ಯಾಂಕ್ ಸಿಬ್ಬಂದಿ ಸಂಖ್ಯೆ ಅದರಲ್ಲೂ ಕ್ಲರಿಕಲ್ ಮತ್ತು ಅಧೀನ ಸಿಬ್ಬಂದಿ ಸಂಖ್ಯೆ ಸ್ವಲ್ಪ ಮಟ್ಟಿಗೆ ಕುಸಿದಿದೆ. ಡಿಜಿಟಲ್ ಉಪಕರಣ ಮತ್ತು ಎಟಿಎಂಗಳ ಮೂಲಕ ವಹಿವಾಟು ಹೆಚ್ಚಾಗಿರುವುದು ಇದಕ್ಕೆ ಕಾರಣ.
ಕ್ಲರಿಕಲ್ ಹುದ್ದೆಗಳು ಕಡಿಮೆ ವೆಚ್ಚದಾಯಕ ಮತ್ತು ಉಪಯುಕ್ತ ಸಂಪನ್ಮೂಲವಾಗಿವೆ. ಎಲ್ಲಾ ಬ್ಯಾಂಕುಗಳು ಉತ್ತಮ ವೆಚ್ಚ-ಆದಾಯ ಅನುಪಾತವನ್ನು ಹೊಂದಬಯಸಿರುವಾಗ, 30 ಸಾವಿರ ರೂಪಾಯಿಯಿಂದ ಪ್ರಾರಂಭವಾಗುವ ಸಂಬಳದಲ್ಲಿ ಹೆಚ್ಚಿನ ಗುಮಾಸ್ತರನ್ನು ನೇಮಿಸಿಕೊಳ್ಳಲು ಸಾಧ್ಯವಿರುವಾಗ, 70 ಸಾವಿರ ರೂಪಾಯಿ ಸಂಬಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಧಿಕಾರಿಗಳನ್ನು ಏಕೆ ನೇಮಿಸಿಕೊಳ್ಳಬೇಕು?
| ಸಿ.ಎಚ್. ವೆಂಕಟಾಚಲಂ ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘದ ಪ್ರಧಾನ ಕಾರ್ಯದರ್ಶಿ