HEALTH TIPS

ಒಮ್ಮೆ ಡೆಂಗ್ಯೂ ಬಂದರೆ ಮತ್ತೆ ಬರುವ ಸಾಧ್ಯತೆ ಇದೆಯೇ? ಅಪಾಯಕಾರಿ ಲಕ್ಷಣಗಳೇನು?

 ಇತ್ತೀಚೆಗೆ ಕೊರೊನಾ ಪ್ರಕರಣಗಳ ಜೊತೆಗೆ ಡೆಂಗ್ಯೂ ಜ್ವರ ಕೂಡಾ ಹೆಚ್ಚಾಗಿ ಭಾದಿಸುತ್ತಿದ್ದು. ಜನರಲ್ಲಿ ಆತಂಕಕ್ಕೆ ಕಾರಣವಾಗುತ್ತಿದೆ. ಯಾಕೆಂದರೆ ಇದನ್ನು ಕಡೆಗಣಿಸಿದರೆ ಇದು ಮಾರಣಾಂತಿಕವಾಗಿ ಪರಿಣಮಿಸಬಹುದು. ಡೆಂಗ್ಯೂ ಜ್ವರವನ್ನು ''ಮೂಳೆ ಮುರಿಯುವ ರೋಗ'' ಅಂತಾನೂ ಕರೆಯುತ್ತಾರೆ. ಯಾಕೆಂದರೆ ಜ್ವರ, ತಲೆನೋವು,ಕಣ್ಣುಗಳ ಹಿಂದೆ ನೋವಿನ ಜೊತೆಗೆ ಮೈಕೈನೋವು, ಮೂಳೆ, ಕೀಲು ನೋವು ಕೂಡಾ ಹೆಚ್ಚು ನೋವು ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಒಂದು ಬಾರಿ ಯಾವುದೇ ಜ್ವರ ಬಂದರೂ ಮತ್ತೊಮ್ಮೆ ಅದು ಹೆಚ್ಚು ಭಾದಿಸುವುದಿಲ್ಲ ಎನ್ನುತ್ತಾರೆ. ಆದರೆ ಡೆಂಗ್ಯೂ ಜ್ವರ ವಿಚಾರದಲ್ಲಿ ಹೀಗೇನಾದರೂ ಇದೆಯಾ, ಇದರ ಲಕ್ಷಣಗಳೇನು, ಇದನ್ನು ತಡೆಗಟ್ಟುವ ವಿಧಾನಗಳೇನು ಎನ್ನುವ ಮಾಹಿತಿ ಈ ಲೇಖನದಲ್ಲಿದೆ ನೋಡಿ.

ಡೆಂಗ್ಯೂ ಜ್ವರದ ಲಕ್ಷಣಗಳಿವು

ಡೆಂಗ್ಯೂ ಜ್ವರವು ಸಾಮಾನ್ಯವಾಗಿ ಎರಡರಿಂದ ಏಳು ದಿನಗಳವರೆಗೆ ಇರುತ್ತದೆ. ಇದರೊಂದಿಗೆ ಮೊದಲೇ ವಿವರಿಸಿದಂತೆ ತಲೆನೋವು, ಕಣ್ಣುಗಳ ಹಿಂದೆ ನೋವು, ಮೈಕೈ, ಸ್ನಾಯು, ಮೂಳೆಗಳಲ್ಲಿ ನೋವು. ಚರ್ಮದಲ್ಲಿ ದದ್ದು ಮತ್ತು ಮೂಗು ಅಥವಾ ವಸಡುಗಳಿಂದ ರಕ್ತಸ್ರಾವವೂ ಆಗಬಹುದು. ಅಲ್ಲದೆ ಕೆಲವು ಡೆಂಗ್ಯೂ ಭಾದಿತ ರೋಗಿಗಳಲ್ಲಿ ಮಲ, ಮೂತ್ರದಲ್ಲಿಯೂ ರಕ್ತಸ್ರಾವವಾಗಬಹುದು. ಆದರೆ ಈ ಎಲ್ಲಾ ಲಕ್ಷಣಗಳು ಪ್ರತಿ ರೋಗಿಯಲ್ಲೂ ಕಂಡುಬರದು.

ನಿಮಗೆ ಬಂದಿರುವ ಜ್ವರ ಡೆಂಗ್ಯೂ ಆಗಿದ್ದಲ್ಲಿ ಜ್ವರವು ಕಡಿಮೆಯಾದಂತೆ ಅನಿಸಿದರೂ ಪ್ಲೇಟ್‌ಲೆಟ್‌ ಮಟ್ಟಗಳು ಕಡಿಮೆಯಾಗಲು ಪ್ರಾರಂಭಿಸುತ್ತವೆ. ನಿರಂತರವಾಗಿ ವಾಂತಿಯ ಜೊತೆಗೆ ಹೊಟ್ಟೆಯಲ್ಲಿ ನೋವು, ರಕ್ತಸ್ರಾವವೂ ಆಗಬಹುದು. ಹಾಗಾಗಿ ಜ್ವರವು ಕಡಿಮೆಯಾಗುತ್ತಾ ಬಂದೂ ಈ ಲಕ್ಷಣಗಳ ಬಗ್ಗೆ ಎಚ್ಚರಿಕೆ ವಹಿಸಿ. ಈ ರೀತಿಯ ಲಕ್ಷಣಗಳು ಕಂಡುಬಂದರೆ ತಕ್ಷಣವೇ ವೈದ್ಯರನ್ನು ಭೇಟಿ ಮಾಡುವುದು ಅತ್ಯಗತ್ಯ.

ಒಬ್ಬರಿಗೆ ಡೆಂಗ್ಯೂ ಅನೇಕ ಬಾರಿ ಬರಬಹುದೇ..?

ಡೆಂಗ್ಯೂ ವೈರಸ್‌ ಅನ್ನು ಹರಡುವ ಸೊಳ್ಳೆಗಳಲ್ಲಿ ಎರಡು ವಿಧಗಳಿವೆ. ಒಂದು ಈಡಿಸ್‌ ಈಜಿಪ್ಟಿ. ಇನ್ನೊಂದು ಈಡಿಸ್‌ ಆಲ್ಬೊಪಿಕ್ಟಸ್‌. ಎರಡೂ ವಿಧದ ಈಡಿಸ್ ಸೊಳ್ಳೆಗಳು ತಮ್ಮ ಮೊಟ್ಟೆಗಳನ್ನು ಶುದ್ಧ, ನಿಂತಿರುವ ನೀರಿನ ಕೊಳಗಳಲ್ಲಿ ಇಡುತ್ತವೆ. ಈ ಸೊಳ್ಳೆಗಳು ಹಗಲಿನಲ್ಲಿ ಜನರನ್ನು ಕಚ್ಚುತ್ತವೆ, ಈ ಎರಡು ಅವಧಿ ಅಂದರೆ 09:00-11:00 ಮತ್ತು 13:00-15:00 ಈ ಸಮಯವು ಇದರ ಗರಿಷ್ಠ ಆಹಾರದ ಸಮಯವಾಗಿದೆ.

ಇನ್ನೊಂದು ವಿಚಾರ ಏನೆಂದರೆ ಡೆಂಗ್ಯೂ ಜ್ವರವು ಕೇವಲ ಒಂದು ತಳಿಯನ್ನು ಹೊಂದಿದೆ ಎಂದು ಹೆಚ್ಚಿನ ಜನರು ಅಂದುಕೊಂಡಿರಬಹುದು. ಆದರೆ ಈ ಅಪಾಯಕಾರಿ ವೈರಸ್‌ನ 4 ವಿಭಿನ್ನ ತಳಿಗಳಿವೆ ಎಂಬುದು ಸತ್ಯ. ಒಬ್ಬ ವ್ಯಕ್ತಿಯು ಒಮ್ಮೆ ಸೋಂಕಿಗೆ ಒಳಗಾದ ನಂತರ, ಅವರ ದೇಹವು ವೈರಸ್‌ನ ಆ ಸ್ಟ್ರೈನ್‌ಗೆ ಮಾತ್ರ ಪ್ರತಿರಕ್ಷೆಯನ್ನು ನಿರ್ಮಿಸುತ್ತದೆ. ಇದರರ್ಥ ಒಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಇನ್ನೂ 3 ಬಾರಿ ಡೆಂಗ್ಯೂ ಜ್ವರದಿಂದ ಸೋಂಕಿಗೆ ಒಳಗಾಗಬಹುದು. ಇದಲ್ಲದೆ, ಪ್ರತಿ ಡೆಂಗ್ಯೂ ಜ್ವರ ಮರುಸೋಂಕು ಹಿಂದಿನ ಸೋಂಕಿಗಿಂತ ಹೆಚ್ಚು ಅಪಾಯಕಾರಿಯೂ ಆಗಬಹುದು. ಆದ್ದರಿಂದ ಡೆಂಗ್ಯೂ ಜ್ವರ ಬಂದಾಗ ನಿರ್ಲಕ್ಷ್ಯ ಮಾಡಬೇಡಿ.

ಈ ಸೋಂಕು ತಡೆಯಲು ಯಾವ ಕ್ರಮ ಕೈಗೊಳ್ಳಬಹುದು..?

ಈ ಅಪಾಯಕಾರಿ ಜ್ವರವು ಡೆಂಗ್ಯೂ ವೈರಸ್‌ನಿಂದ ಉಂಟಾಗುತ್ತೆ. ಇದಕ್ಕೆ ಕಾರಣವಾಗುವ ಈಡಿಸ್‌ ಈಜಿಪ್ಟಿ ಸೊಳ್ಳೆಯ ಕಡಿತ ಈ ಜ್ವರ ಕಂಡುಬರುತ್ತದೆ. ಹಾಗಾಗಿ ಸೊಳ್ಳೆಯ ಕಡಿತದಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳುವುದು ಮುಖ್ಯ. ಆದ್ದರಿಂದ ಸೊಳ್ಳೆ ನಿವಾರಕಗಳು, ಸೊಳ್ಳೆ ಪರದೆ, ಸೊಳ್ಳೆ ಸಂತಾನೋತ್ಪತ್ತಿ ನಡೆಸುವ ಸ್ಥಳಗಳನ್ನು ಸ್ವಚ್ಛಗೊಳಿಸುವುದು ಮತ್ತು ಕೀಟನಾಶಕಗಳನ್ನು ಬಳಸುವುದು ಡೆಂಗ್ಯೂ ತಡೆಗಟ್ಟುವಲ್ಲಿ ಸಹಕಾರಿ.

ಕೊರೊನಾ ಜೊತೆಗೆ ಡೆಂಗ್ಯೂ ಒಂದೇ ಸಮಯದಲ್ಲಿ ಕಂಡುಬರುತ್ತಾ..?

ವಿಶೇಷವಾಗಿ ಸೊಳ್ಳೆಯಿಂದ ಬರುವ ಆರೋಗ್ಯ ಸಮಸ್ಯೆ ಕಂಡು ಬರುವುದೇ ಹೆಚ್ಚು ಮಳೆಗಾಲದಲ್ಲಿ. ಇದರಲ್ಲಿ ಡೆಂಗ್ಯೂ ಜ್ವರ ಕೂಡಾ ಹೊರತಾಗಿಲ್ಲ, ಅದರಲ್ಲೂ ಮುಂಗಾರಿನ ಸಮಯದಲ್ಲಿ, ಮುಂಗಾರಿನ ನಂತರ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತವೆ. ಆದರೆ ಕೋರೊನಾ ಸೋಂಕು ಯಾವುದೇ ನಿರ್ದಿಷ್ಟ ಕಾಲವನ್ನು ಹೊಂದಿಲ್ಲ. ಕೆಲವರು ಎರಡೂ ವೈರಸ್‌ಗಳಿಂದ ಏಕಕಾಲದಲ್ಲಿ ಸೋಂಕಿಗೆ ಒಳಗಾಗುವ ಸಾಧ್ಯತೆ ಇದೆ. ನಿಖರವಾಗಿ ಈ ಸೋಂಕನ್ನು ಪತ್ತೆಹಚ್ಚುವುದು, ರೋಗ ನಿರ್ಣಯ ಮತ್ತು ನಿರ್ವಹಣೆ ಮಾಡುವುದು ಇಂತಹ ರೋಗಿಗಳಲ್ಲಿ ನಿರ್ದಿಷ್ಟ ಸವಾಲನ್ನು ಉಂಟು ಮಾಡಬಹುದು.

ಮಕ್ಕಳು ಹಾಗೂ ವೃದ್ಧರ ಬಗ್ಗೆ ವಿಶೇಷ ಕಾಳಜಿ

ಡೆಂಗ್ಯೂ ಜ್ವರವು ಮಕ್ಕಳಲ್ಲಿ ಹಾಗೂ ವಯಸ್ಸಾದವರಲ್ಲಿ ಅಪಾಯಕಾರಿಯಾಗಿ ಪರಿಣಮಿಸಬಹುದು. ಇವರಲ್ಲಿ ಡೆಂಗ್ಯೂ ಜ್ವರದಿಂದಾಗಿ ರಕ್ತಸ್ರಾವವಾಗುವ ಸಾಧ್ಯತೆಗಳೂ ಅಧಿಕ. ಮಕ್ಕಳಲ್ಲಿ ಕೆಲವೊಂದು ಲಕ್ಷಣಗಳು ಕಂಡು ಬರದೆಯೂ ಇರಬಹುದು. ಆದರೆ ಹಿರಿಯರಲ್ಲಿ ಸೋಂಕಿನ ಪ್ರಭಾವ ತೀವ್ರವಾಗಿರಬಹುದು. ಹಾಗಾಗಿ ಡೆಂಗ್ಯೂ ಸಮಸ್ಯೆ ಬಾರದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಮುಖ್ಯ. ಆದರೂ ಜ್ವರ ಕಾಣಿಸಿಕೊಂಡರೆ ವೈದ್ಯಕೀಯ ಸಲಹೆ ಪಡೆಯುವ ಮೂಲಕ ಸಮಸ್ಯೆಯು ಇನ್ನಷ್ಟು ಉಲ್ಬಣಗೊಳ್ಳದಂತೆ ನೋಡಿಕೊಳ್ಳಬಹುದು. ಸಾಮಾನ್ಯ ಜ್ವರವೆಂದು ಪರಿಗಣಿಸಿ ಸ್ವಯಂ ವೈದ್ಯರಾಗಬೇಡಿ. ಈಗಾಗಲೇ ಅನೇಕರು ಡೆಂಗ್ಯೂ ಜ್ವರವನ್ನು ನಿರ್ಲಕ್ಷ್ಯಿಸಿ ಪ್ರಾಣ ಕಳೆದುಕೊಂಡಿರುವುದನ್ನು ನೀವು ನೋಡಿರಬಹುದು. ಮುನ್ನಚ್ಚರಿಕೆಯ ಜೊತೆಗೆ ಡೆಂಗ್ಯೂ ರೋಗ ಲಕ್ಷಣಗಳು ಕಂಡುಬಂದರೆ ವೈದ್ಯಕೀಯ ಚಿಕಿತ್ಸೆ ಪಡೆಯುವುದನ್ನು ಮರೆಯಬೇಡಿ.


 

 

 

 

 

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries